December 5, 2025
d724077cc946698719736fdb2b4a54585015d86916d633819eced43a4a372274

ಮಂಗಳೂರು: ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ ದ ಕೆರೆಯೊಂದರಲ್ಲಿ ಅಪೂರ್ವವಾದ ಬುದ್ಧನ ಶಿಲ್ಪ ಮತ್ತು ಗುಹಾ ಸಮುಚ್ಚಯಗಳು ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯ ಸಂದರ್ಭ ದಲ್ಲಿ ಪತ್ತೆಯಾಗಿವೆ ಎಂದು ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ದೇವಾಲಯದ ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡಿರುವ ಸ್ಥಿತಿಯಲ್ಲಿ ಕಂಡುಬಂದ ಈ ಶಿಲ್ಪವನ್ನು ಕದ್ರಿ ದೇವಾಲಯದ ಆಡಳಿತಾಧಿಕಾರಿಗಳ ಅನುಮತಿಯೊಂದಿಗೆ ಮೇಲೆ ತೆಗೆದು ಅಧ್ಯಯನ ಮಾಡಲಾಗಿದೆ ಎಂದು ಪ್ರೊ.ಮುರುಗೇಶಿ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಈ ಶಿಲ್ಪವು ಪದ್ಮಪೀಠದ ಮೇಲೆ ಪದ್ಮಾಸನದಲ್ಲಿ ಧ್ಯಾನಮುದ್ರೆಯಲ್ಲಿ ಕುಳಿತಂತೆ ಕೆತ್ತಲಾಗಿದೆ. ಶಿಲ್ಪದ ಬಲಗೈ ಸಂಪೂರ್ಣ ತುಂಡಾಗಿದೆ. ಎಡಗೈನ ಹಸ್ತ ಮಡಚಿದ ಕಾಲುಗಳ ಮಧ್ಯೆ ಇರಿಸಲ್ಪಟ್ಟಿದೆ. ಎಡಭುಜದ ಮೇಲಿಂದ ಹಾದುಬಂದಿರುವ ಉತ್ತರೀಯ, ಶಿಲ್ಪದ ಎಡಭಾಗದ ಎದೆಯ ಮೇಲೆ ಚಪ್ಪಟೆಯಾಗಿ ಇಳಿಬಿಟ್ಟಂತೆ ಅಸ್ಪಸ್ಟವಾಗಿ ಕಾಣುತ್ತದೆ. ತಲೆಯ ಭಾಗ ತುಂಡಾಗಿದ್ದು, ಕಾಣೆಯಾಗಿದೆ.

ದೇವಾಲಯದ ಹೊರ ಆವರಣದಲ್ಲಿರುವ ಸ್ಥಂಭದ ಕೆಳಭಾಗದ ಫಲಕಗಳಲ್ಲಿ ಪದ್ಮಪೀಠದ ಮೇಲೆ ಕುಳಿತ ಧ್ಯಾನಿಬುದ್ಧರ ಉಬ್ಬುಶಿಲ್ಪಗಳಿವೆ. ಆದ್ದರಿಂದ, ಈ ಶಿಲ್ಪವನ್ನು ವಿವಾದೀತವಾಗಿ ಬುದ್ಧನ ಶಿಲ್ಪವೆಂದು ಗುರುತಿಸ ಲಾಗಿದೆ. ಶಿಲ್ಪವು 68 ಸೆ.ಮೀ. ಎತ್ತರವಿದ್ದು, ೪೮ ಸೆ.ಮೀ. ಅಗಲವಿದೆ.

ಈ ಶಿಲ್ಪವು ಗೋವಾದ ಮುಶಿರಾ ವಾಡೋದಲ್ಲಿ ದೊರೆತ ಶಿಲ್ಪವನ್ನು ಬಹುತೇಕ ಹೋಲುತ್ತದೆ. ಆದ್ದರಿಂದ ಶಿಲ್ಪದ ಕಾಲಮಾನವನ್ನು ಕ್ರಿ.ಶ. 4-6ನೇ ಶತಮಾನದ ಶಿಲ್ಪವೆಂದು ಪರಿಗಣಿಸಬಹುದಾಗಿದೆ. ಶಿಲ್ಪವು ಪದ್ಮದ ಕೆಳಭಾಗದಲ್ಲಿ ಪಾಣಿಪೀಠದ ಒಳಗೆ ಸಿಕ್ಕಿಸುವ ಗೂಟವನ್ನು ಹೊಂದಿದ್ದು, ಇದುವೇ ಕದ್ರಿಯ ಮೂಲಸ್ಥಾನ ವಿಗ್ರಹವಾಗಿತ್ತೆಂದು ಭಾವಿಸಬಹುದಾಗಿದೆ ಎಂದು ಪ್ರೊ.ಮುರುಗೇಶಿ ಅಭಿಪ್ರಾಯಪಟ್ಟಿದ್ದಾರೆ.

ಕದ್ರಿ ಗುಹೆಗಳು: ಕದ್ರಿ ಮಂಜುನಾಥ ದೇವಾಲಯದ ಕೆರೆಗಳ ಮೇಲ್ಭಾಗದ ಗುಡ್ಡೆಯಲ್ಲಿ ಮೂರು ಗುಹೆಗಳನ್ನು ಕೆಂಪು ಮುರಕಲ್ಲನ್ನು ಕಡಿದು ನಿರ್ಮಿಸಲಾಗಿದೆ. ಬಲಭಾಗದ ಗುಹೆಯ ಪ್ರವೇಶದ್ವಾರವು ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿಗಳ ಪ್ರವೇಶದ್ವಾರದಂತಿದೆ ಹಾಗೂ ಇಡೀ ರಚನೆ ಕಲ್ಮನೆ ಸಮಾಧಿಯಂತಿದೆ.

ಇನ್ನೆರಡು ಗುಹೆಗಳು ಎತ್ತರವಾದ ಜಗತಿಯ ಮೇಲೆ ನಿರ್ಮಿಸಲಾಗಿದ್ದು, ಚೌಕಾಕಾರದ ಎರಡು ಪ್ರವೇಶ ದ್ವಾರಗಳನ್ನು ಒಳಗೊಂಡಿವೆ. ಗುಹೆಗಳ ಹೊರ ಮತ್ತು ಒಳಭಾಗದ ಭಿತ್ತಿಗಳು ನಯವಾಗಿ ನಿರಾಡಂಬ ರವಾಗಿವೆ. ಗುಹೆಗಳು ಕೇವಲ ಒಂದೊಂದು ಕೋಣೆಯನ್ನು ಒಳಗೊಂಡಿದ್ದು, ದೀಪಗಳನ್ನು ಇರಿಸುವ ಗೂಡುಗಳನ್ನು ಒಳಗೊಂಡಿವೆ. ಆದ್ದರಿಂದ, ಈ ಗುಹಾ ರಚನೆಗಳನ್ನು ವಾಸ್ತವ್ಯದ ಉದ್ದೇಶಕ್ಕಾಗಿ ರಚಿಸಿದ ಗುಹೆಗಳೆಂದು ತರ್ಕಿಸಬಹುದಾಗಿದೆ. ಗುಹೆಗಳ ವಾಸ್ತು ರಚನೆಯ ವಿನ್ಯಾಸ ಮತ್ತು ಶೈಲಿಗಳನ್ನು ಗಮನಿಸಿ ದರೆ, ಅವುಗಳನ್ನು ಸಹ ಕ್ರಿ.ಶ. ಸುಮಾರು 4-6ನೇ ಶತಮಾನದಲ್ಲಿ ನಿರ್ಮಿಸಿದ ಗುಹೆಗಳೆಂದು ನಿರ್ಧರಿಸಬಹುದಾಗಿದೆ ಎಂದವರು ಹೇಳಿದ್ದಾರೆ.

ಮಹತ್ವ: ಕದ್ರಿಯ ಈ ಶೋಧಗಳು, ಕದ್ರಿಯ ಪ್ರಾಚೀನತೆಯನ್ನು ಕ್ರಿ.ಶ. 4-5ನೇ ಶತಮಾನಕ್ಕೆ ತೆಗೆದು ಕೊಂಡು ಹೋಗುತ್ತವೆ. ಕದ್ರಿಯು, ಕ್ರಿಸ್ತ ಶಕ ಆರಂಭದಲ್ಲಿ ಮಹಾಯಾನ ಬೌದ್ಧ ಕೇಂದ್ರವಾಗಿದ್ದು, ನಂತರ ವಜ್ರಯಾನ ಬೌದ್ಧ ಕೇಂದ್ರವಾಗಿ ಕೊನೆಗೆ ದಕ್ಷಿಣ ಭಾರತದ ಪ್ರಮುಖ ನಾಥಪಂಥದ ಕೇಂದ್ರವಾಗಿ ಪರಿವರ್ತನೆ ಹೊಂದಿತೆಂದು ತಿಳಿಯಬಹುದಾಗಿದೆ.

ಕದ್ರಿಯಲ್ಲಿ ಪುರಾತತ್ತ್ವ ಅನ್ವೇಷಣೆಯ ವೇಳೆ ದೇವಾಲಯದ ಆಡಳಿತಾಧಿಕಾರಿ ಅರುಣ್ ಕುಮಾರ್ ಸಹಕರಿಸಿದ್ದು, ಮಣಿಪಾಲ ವಿವಿಯ ಪಿಹೆಚ್‌ಡಿ ವಿದ್ಯಾರ್ಥಿ ಶ್ರೇಯಸ್ ಕೊಳಪೆ, ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜಿನ ಪುರಾತತ್ತ್ವ ವಿಭಾಗದ ಉಪನ್ಯಾಸಕ ಶ್ರೇಯಸ್ ಬಂಟಕಲ್ಲು, ವಿಭಾಗದ ವಿದ್ಯಾರ್ಥಿ ರವೀಂದ್ರ ಕುಶ್ವಾ, ಮಂಗಳೂರು ವಿವಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಕಾರ್ತಿಕ್ ಭಾಗವಹಿಸಿರುವುದಾಗಿ ಪ್ರೊ.ಮುರುಗೇಶಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.