




ಅಂಡಿಂಜೆ, ಜೂ. 8: ತನ್ನ ಸಹೋದರನ ಹೆಸರಿನಲ್ಲಿ ಪಂಚಾಯತ್ ಕಾಮಗಾರಿಗಳನ್ನು ಕಾನೂನು ಬಾಹಿರವಾಗಿ ನಡೆಸುತ್ತಿರುವ ಅಂಡಿಂಜೆ ಗ್ರಾ.ಪಂ. ಸದಸ್ಯ ಜಗದೀಶ್ ಹೆಗ್ಡೆಯ ಸದಸ್ಯತ್ವವನ್ನು ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಹರೀಶ್ ಕುಮಾರ್ ಎಂಬವರು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ.
ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆಯಂತೆ ಗ್ರಾ.ಪಂ. ಸದಸ್ಯರಾಗಲಿ ಅವರ ಕುಟುಂಬದವರಾಗಲಿ ತಾವು ಸದಸ್ಯರಾಗಿರುವ ಗ್ರಾ.ಪಂ.ನ ಕಾಮಗಾರಿಗಳನ್ನು ಗುತ್ತಿಗೆ ಪಡೆಯುವಂತಿಲ್ಲ. ಆದರೆ ಇಲ್ಲಿ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಸದಸ್ಯ ಜಗದೀಶ್ ಹೆಗ್ಡೆಯವರು ತನ್ನ ಸಹೋದರ ಅಮರೇಶ ಹೆಗ್ಡೆಯವರ ಹೆಸರಿನಲ್ಲಿ ಗ್ರಾ.ಪಂ.ನ ಪಿಡಿಒ ಕೂಡಾ ಶಾಮೀಲಾಗಿ ಕಾನೂನು ಬಾಹಿರ ಅಕ್ರಮವನ್ನು ನಡೆಸುತ್ತಾ ಬಂದಿದ್ದಾರೆ. ಪಂಚಾಯತ್‌ರಾಜ್ ಅಧಿನಿಯಮ ಮೀರಿ ಲಾಭಗೈಯ್ಯುವ ಉದ್ದೇಶದಿಂದ ಗ್ರಾ.ಪಂ. ಸದಸ್ಯಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿರುವ ಜಗದೀಶ್ ಹೆಗ್ಡೆ ಅವರ ಸಹೋದರ ಅಮರೇಶ್ ಹೆಗ್ಡೆ ಹಾಗೂ ಪಂಚಾಯತ್‌ನ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಪ್ರಕರಣದ ಬಗ್ಗೆ ಸ್ಪಷ್ಟನೆ ಕೇಳಲು ಗ್ರಾ.ಪಂ. ಸದಸ್ಯ ಜಗದೀಶ್ ಹೆಗ್ಡೆಯವರನ್ನು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ಸಂಪರ್ಕಿಸಲು ಪ್ರಯತ್ನಿದ್ದು, ಸಂಪರ್ಕಕ್ಕೆ ಲಭಿಸಿಲ್ಲ.