ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರು ಹಲವು ರೀತಿಯಲ್ಲಿ ತಮ್ಮ ನೆಚ್ಚಿನ ಪ್ರಧಾನಿ ಮೇಲೆ ಪ್ರೀತಿಯನ್ನು ಮೆರೆಯುತ್ತಾರೆ. ಅಂತಹುದೇ ಪ್ರಕರಣವೊಂದು ಬೆಳ್ತಂಗಡಿಯಲ್ಲಿ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದ ತಿಲಕ್ ಎಂಬ ಯುವಕ ತನ್ನ ಮದುವೆಯ ಸಮಾರಂಭವನ್ನೂ ಮೋದಿಗೆ ಅರ್ಪಿಸಿದ್ದಾನೆ. ಅರ್ಥಾತ್, ಮದುವೆಯಲ್ಲೂ ಮೋದಿ ಅಭಿಮಾನವನ್ನು ಮೆರೆದಿದ್ದಾನೆ. ಮೋದಿಯದ್ದೊಂದು ಪುತ್ಥಳಿಯನ್ನು ಮಾಡಿಸಿ, ಕಲ್ಯಾಣಮಂಟಪದ ಮುಂದಿರಿಸಿ, ಅದರ ಕೆಳಗೆ, ‘ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು, ಏನಂತೀರಿ?’ ಎಂದು ಬರೆಸಿದ್ದಾನೆ.
ಅಲ್ಲದೆ ಪ್ರಧಾನಿ ಮೋದಿಯವರ ಕಾರ್ಯಗಳ ಕುರಿತು ಭಿತ್ತಿಪತ್ರಗಳನ್ನು ಮಾಡಿ ಅಂಟಿಸಿದ್ದು, ಮದುವೆಗೆ ಆಗಮಿಸಿದವರ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲದೆ, ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿದ್ದು, ವೈರಲ್ ಆಗಲಾರಂಭಿಸಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.