ಮಂಗಳೂರು : ಪಾದಯಾತ್ರೆ ನಡೆಸುತ್ತಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಜೊತೆಗೆ ಅಪರಿಚಿತ ಶ್ವಾನವೊಂದು ಸುಮಾರು 600ಕಿ.ಮೀ ಹೆಜ್ಜೆ ಹಾಕಿದ ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿದೆ. ಶಬರಿಮಲೆ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ತೆರಳಿದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೇಕ್ಕೇರಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳು ನವೆಂಬರ್ 4 ರಂದು ಪಾದಯಾತ್ರೆ ಶುರು ಮಾಡಿದ್ದರು.
ಇವರು ಪಾದಯಾತ್ರೆ ಮಾಡುತ್ತಿದ್ದ ವೇಳೆ ಗೋಕಾಕ್ ತಾಲೂಕಿನ ಗ್ರಾಮವೊಂದರಲ್ಲಿ ಅಪರಿಚಿತ ಶ್ವಾನವೊಂದು ಅವರ ಜೊತೆಗೆ ಹೆಜ್ಜೆ ಹಾಕಿದೆ. ಮೊದಲು ಏನೋ ಸ್ವಲ್ಪ ದೂರ ಬರಬಹುದು ಎಂದು ಅಯ್ಯಪ್ಪ ಮಾಲಾಧಾರಿಗಳು ಅಂದುಕೊಂಡಿದ್ದರು. ಆದರೆ ಇದೀಗ ಅವರೊಂದಿಗೆ ಸುಮಾರು 600 ಕಿಲೋ ಮೀಟರ್ ಕ್ರಮಿಸಿದೆ. ಪ್ರತಿ ದಿನ ಸುಮಾರು 40 ಕಿಮೀ ನಡೆಯುತ್ತಿರುವ ಶ್ವಾನವನ್ನು ಕಂಡು ಎಲ್ಲರಿಗೂ ಇದೀಗ ಅಚ್ಚರಿ ಮೂಡಿಸಿದೆ.
ಹತ್ತು ಮಂದಿ ಮಾಲಾಧಾರಿಗಳ ತಂಡ ಮಂಗಳೂರು ಮೂಲಕ ರಾಜ್ಯದ ಗಡಿದಾಟಿ ಕೇರಳದ ಕಾಸರಗೋಡಿಗೆ ತಲುಪಿದ್ದಾರೆ. ಗುರು ಸ್ವಾಮಿಗಳು ಶ್ವಾನವನ್ನು ಓಡಿಸಿದರು ಸಹ ಅದು ಹೋಗಿಲ್ಲವಾಗಿದೆ. ಅದರಿಂದ ತಪ್ಪಿಸಿಕೊಂಡು ಹೋಗುವ ಯಾವ ಪ್ರಯತ್ನವು ಸಫಲವಾಗಿಲ್ಲ. ಅಯ್ಯಪ್ಪ ಮಾಲಾಧಾರಿಗಳು ನಡೆಯುವಾಗ ನಡೆಯುತ್ತದೆ. ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಅದೂ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ಅಯ್ಯಪ್ಪ ಸ್ವಾಮಿಗಳು ಪ್ರಯಾಣ ಮುಂದುವರಿಸಿದಾಗ ಅದೂ ಹಿಂಬಾಲಿಸುತ್ತದೆ ಎಂದು ಅಯ್ಯಪ್ಪ ಮಾಲಾಧಾರಿಗಳು ತಿಳಿಸಿದ್ದಾರೆ.