January 22, 2025
c2eaa207-e85b-4f52-acfa-5c1083f9108b

ಉಡುಪಿ : ನೇಜಾರುವಿನ ತೃಪ್ತಿ ಲೇಔಟ್ ನಲ್ಲಿ  ಮೂವರು ಮಹಿಳೆಯರ ಸಹಿತ ಒಂದೇ ಕುಟುಂಬದ ನಾಲ್ವರನ್ನು ಕೊಲೆಗೈದ ಪ್ರಕರಣದ ಆರೋಪಿ ಸಂತೆಕಟ್ಟೆಯಿಂದ ತೃಪ್ತಿ ಲೇಔಟ್ ಗೆ ಆಟೋ ರಿಕ್ಷಾದಲ್ಲಿ ಆಗಮಿಸಿದ್ದು ಬೆಳಕಿಗೆ ಬಂದಿದೆ. ಆರೋಪಿ ಸಂತೆಕಟ್ಟೆಯಿಂದ ಶ್ಯಾಮ್ ಎಂಬವರು ಆಟೋ ರಿಕ್ಷಾದಲ್ಲಿ ಕೊಲೆಯಾದ ಹಸೀನಾ ಅವರ ಮನೆಗೆ ಆಗಮಿಸಿದ್ದಾನೆ. ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಶ್ಯಾಮ್, “ಬೆಳಗ್ಗೆ 8:30ರಿಂದ 9 ಗಂಟೆಯ ಮಧ್ಯೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕ್ವೀನ್ಸ್ ರಸ್ತೆಯಲ್ಲಿ ನನ್ನ ರಿಕ್ಷಾವನ್ನು ಏರಿದ್ದಾನೆ. ನೇಜಾರುವಿನ ತೃಪ್ತಿ ಲೇಔಟ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾನೆ. ಅದರಂತೆ ಆತನನ್ನು ತೃಪ್ತಿ ಲೇಔಟ್ ನಲ್ಲಿ ಇದೀಗ ಕೊಲೆ ನಡೆದಿರುವ ಮನೆಯ ಗೇಟ್ ಬಳಿ ಬಿಟ್ಟಿದ್ದೇನೆ” ಎಂದು ತಿಳಿಸಿದ್ದಾರೆ.

“ಕೊಲೆ ನಡೆದಿರುವ ಮನೆಗೆ ನಾನು ಬಿಟ್ಟ ಬಳಿಕ 15 ನಿಮಿಷಗಳ ಅಂತರದಲ್ಲಿ ಆತ ಮತ್ತೆ ಸಂತೆಕಟ್ಟೆ ಆಟೋ ನಿಲ್ದಾಣಕ್ಕೆ ಬಂದು ಕ್ಯೂನಲ್ಲಿದ್ದ ಬೇರೊಂದು ರಿಕ್ಷಾ ಏರಿದ್ದಾನೆ. ಈ ವೇಳೆ ಆತನನ್ನು ಗುರುತಿಸಿದ ನಾನು ಇಷ್ಟು ಬೇಗ ಬರಲಿಕ್ಕಿದ್ದರೆ ನಾನು ಕಾಯುತ್ತಿದ್ದೆ ಎಂದು ಹೇಳಿದೆ. ಅದಕ್ಕೆ ಆತ ಪರವಾಗಿಲ್ಲ ಎಂದ. ಅಲ್ಲದೆ ವೇಗವಾಗಿ ಹೋಗುವಂತೆ ಆ ರಿಕ್ಷಾ ಚಾಲಕನಿಗೆ ಸೂಚಿಸಿದ” ಎಂದು ಶ್ಯಾಮ್ ಮಾಹಿತಿ ನೀಡಿದ್ದಾರೆ. “ಸುಮಾರು 45 ವರ್ಷ ಪ್ರಾಯದ ಆ ವ್ಯಕ್ತಿ ಕನ್ನಡ ಮಾತನಾಡುತ್ತಿದ್ದ. ಮುಖಕ್ಕೆ ಮಾಸ್ಕ್ ಧರಿಸಿದ್ದ ಆತನ ಕಣ್ಣಿನ ಭಾಗ ಮಾತ್ರ ಕಾಣಿಸುತ್ತಿತ್ತು. ಬೋಳು ತಲೆಯ ಆ ವ್ಯಕ್ತಿ ಬಿಳಿ ಮೈಬಣ್ಣ ಹೊಂದಿದ್ದ” ಎಂದು ಶ್ಯಾಮ್ ತಿಳಿಸಿದ್ದಾರೆ. ಘಟನೆ ವಿವರ: ಇಂದು ಬೆಳಗ್ಗೆ ನೇಜಾರುವಿನ ತೃಪ್ತಿ ಲೇಔಟ್ ನಿವಾಸಿ ಹಸೀನಾ(42), ಅವರ ಪುತ್ರಿಯರಾದ ಅಫ್ನಾನ್(22) ಮತ್ತು ಅಯ್ನಾಝ್(20) ಮತ್ತು ಪುತ್ರ ಅಸೀಮ್(12)ನನ್ನು ದುಷ್ಕರ್ಮಿಯೋರ್ವ ಹರಿತವಾದ ಆಯುಧದಿಂದ ಇರಿದು ಕೊಲೆಗೈದಿದ್ದಾನೆ. ಈ ವೇಳೆ ಹಸೀನಾರ ಅತ್ತೆ ಹಾಜಿರಾ(70) ಎಂಬವರು ದುಷ್ಕರ್ಮಿಯಿಂದ ಇರಿತಕ್ಕೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.