ನಾಳೆಯ ಕರ್ನಾಟಕ ಬಂದ್ ಗೆ ಕರಾವಳಿಯಿಂದ ಬೆಂಬಲ ಇಲ್ಲ : ದಿಲ್ ರಾಜ್ ಆಳ್ವ

ಕಾವೇರಿ ನದಿ ನೀರಿನ ಹೋರಾಟ ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಜನರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ.

ಸಾಮಾನ್ಯವಾಗಿ ಈ ಹಿಂದಿನ ಅನೇಕ ದಶಕಗಳ ಬೆಳವಣಿಗೆಗಳನ್ನು ಗಮನಿಸಿದಾಗ ಕರ್ನಾಟಕದ ನೆಲ ಜಲ ಪರ ಹೋರಾಟಗಳಿಗೆ ಕರಾವಳಿ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಕಾವೇರಿ ಪರ ಹೋರಾಟ, ಕನ್ನಡ ಪರ ಹೋರಾಟ, ಮೇಕೆದಾಟು, ಸೇರಿದಂತೆ ನೆಲ ಜಲ ಭಾಷೆಗೆ ಸಂಬಂಧಿಸಿದ ಕರ್ನಾಟಕದ ಹೋರಾಟಗಳಿಗೆ ಕರಾವಳಿ ಭಾಗ ಅರ್ಥಾತ್ ತುಳುನಾಡಿನಲ್ಲಿ ಬೆಂಬಲ ವ್ಯಕ್ತವಾಗೋದಿಲ್ಲ.

ಅದರ ಜೊತೆಗೆ ತುಳುನಾಡು ಪರ ಹೋರಾಟಗಳಿಗೂ ಕೂಡ ಕರಾವಳಿ ಹೊರತುಪಡಿಸಿ ಇತರ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಉದಾಃ ತುಳು ಭಾಷೆ, ಎತ್ತಿನಹೊಳೆ ಹೋರಾಟ, ಕಂಬಳ ಸೇರಿದಂತೆ ಇತರ ಹೋರಾಟಗಳಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಬಿಟ್ಟರೆ ಕರ್ನಾಟಕದ ಬೇರೆ ಭಾಗದಿಂದ ಹೇಳಿಕೊಳ್ಳುವಂತಹ ಮಟ್ಟಿಗೆ ಬೆಂಬಲ ವ್ಯಕ್ತವಾದ ಉದಾಹರಣೆ ಇಲ್ಲ.

ಇದೀಗ ಈ ಬಾರಿಯ ಕಾವೇರಿ ಪರ ಹೋರಾಟದಲ್ಲೂ ಕರಾವಳಿಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ದಿನ ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಖಾಸಗಿ ಬಸ್ ಮಾಲಕರ ಸಂಘದ ಮುಖಂಡ ದಿಲ್ ರಾಜ್ ಆಳ್ವ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ, ಜಿಲ್ಲೆಯಲ್ಲಿ ಅಂದು ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಅಲ್ಲದೇ, ತುಳುನಾಡಿನ ನಾಡು ನುಡಿ ಪರ ಹೋರಾಟಗಳಿಗೆ ಕನ್ನಡ ಪರ ಸಂಘಟನೆಗಳು ಬೆಂಬಲ ಕೊಟ್ಟಿಲ್ಲ, ಹೀಗಾಗಿ ಕಾವೇರಿ ಹೋರಾಟಕ್ಕೆ ಮಂಗಳೂರಲ್ಲಿ ಖಾಸಗಿ ಬಸ್‌ಗಳ ಬೆಂಬಲ ಇಲ್ಲ ಎಂದು ಹೇಳಿದ್ದಾರೆ.

ದ.ಕ ಜಿಲ್ಲೆಯಲ್ಲಿ ಬಂದ್‌ಗೆ ಕೇವಲ ನೈತಿಕ ಬೆಂಬಲ ಮಾತ್ರ ಎಂದಿರುವ ದಿಲ್‌ರಾಜ್ ಆಳ್ವ, ಬಂದ್, ಪ್ರತಿಭಟನೆ ಮಾಡಿ ಬಂದ್‌ಗೆ ಬೆಂಬಲವನ್ನು ನೀಡೋದಿಲ್ಲ. ಎತ್ತಿನಹೊಳೆ ವಿಚಾರದಲ್ಲಿ ಕನ್ನಡ ಸಂಘಟನೆಗಳ ಬೆಂಬಲ ಕೇಳಿದ್ದೆವು. ಆಗ ನೀರು ಎಲ್ಲರ ಹಕ್ಕು ಎಂದು ಹೇಳಿ ಬೆಂಬಲ ನೀಡಿಲ್ಲ ಎಂದರು.

ತುಳು ಭಾಷೆ ವಿಚಾರದ ಹೋರಾಟದಲ್ಲಿ ನಮಗೆ ಬೆಂಬಲ ಸಿಕ್ಕಿಲ್ಲ, ತುಳು ಭಾಷೆ ಬಗ್ಗೆ ಚರ್ಚೆ ಆದಾಗ ಆ ಭಾಗದ ಶಾಸಕರು ತಮಾಷೆ ಮಾಡಿದ್ದರು. ಎತ್ತಿನ ಹೊಳೆ ಅವೈಜ್ಞಾನಿಕ ಅಂತಾ ಗೊತ್ತಿದ್ದರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿಲ್ಲ. ಹೀಗಾಗಿ ಕರ್ನಾಟಕ ಬಂದ್‌ಗೆ ನಮ್ಮ ನೈತಿಕ ಬೆಂಬಲ ಮಾತ್ರವೇ ಇದೆ. ಬಸ್ ಗಳ ಓಡಾಟ ಸೇರಿ ಎಲ್ಲವೂ ಅಂದು ಯಥಾಸ್ಥಿತಿಯಲ್ಲಿ ಇರಲಿದೆ ದಿಲ್ ರಾಜ್ ಆಳ್ವ ಹೇಳಿದ್ದಾರೆ.

Check Also

ಬಂಟ್ವಾಳ: ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ

ಬಂಟ್ವಾಳ: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ …

Leave a Reply

Your email address will not be published. Required fields are marked *

You cannot copy content of this page.