May 15, 2025
WhatsApp Image 2023-09-04 at 9.29.34 AM

ಬೆಳ್ತಂಗಡಿ: ಸೌಜನ್ಯಾ ಕುಟುಂಬದ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಮಹೇಶ ಶೆಟ್ಟಿ ತಿಮರೋಡಿ, ‘ಸೌಜನ್ಯಾಗೆ ನ್ಯಾಯ ಕೊಡಿಸಲು ಶುರುವಾದ ಹೋರಾಟ ಸಂಗ್ರಾಮದ ರೂಪವನ್ನು ಪಡೆದಿದೆ. ಈ ಹೋರಾಟವನ್ನು ಹತ್ತಿಕ್ಕಲು ಮುಂದಾದರೆ ಸರ್ಕಾರಕ್ಕೆ ಶಾಪ ತಟ್ಟುತ್ತದೆ. ಜನರು ದಂಗೆ ಎದ್ದರೆ ಅದಕ್ಕೆ ಆಡಳಿತ ಮತ್ತು ರಾಜಕೀಯ ವ್ಯಕ್ತಿಗಳೇ ನೇರ ಹೊಣೆ. ಮರು ತನಿಖೆ ಆಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೂ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.ಬೆಳ್ತಂಗಡಿಯಲ್ಲಿ ಸೆ.3ರಂದು ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.

‘ಬೆಳ್ತಂಗಡಿಯ ಪೊಲೀಸರ ತನಿಖಾ ವೈಫಲ್ಯದಿಂದ ಇಂದು ಸೌಜನ್ಯ ಕುಟುಂಬ ಹಾಗೂ ನಾವೆಲ್ಲ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇದಕ್ಕೆಲ್ಲಾ ಕಾಮಾಂಧರು ಮತ್ತು ಅವರಿಗೆ ಸಹಕರಿಸಿದ ಅಧಿಕಾರಿ ವರ್ಗಗಳೇ ಹೊಣೆ. ಸರ್ಕಾರ ಗಟ್ಟಿ ನಿರ್ಧಾರ ತೆಗೆದು ಪ್ರಕರಣ ಮರುತನಿಖೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ದ ಮುಗಿಬೀಳುವುದಾಗಿ ಅವರು ಎಚ್ಚರಿಸಿದರು.

ನಾಡಿನ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಪ್ರತಿಭಟನಕಾರರಿಂದ ಇಲ್ಲಿನ ಮಿನಿ ವಿಧಾನಸೌಧದ ಆವರಣ ತುಂಬಿ ಹೋಗಿತ್ತು. ಇಲ್ಲಿನ ಬಸ್ ನಿಲ್ದಾಣ ಹಾಗೂ ಮೂರು ಮಾರ್ಗದವರೆಗೂ ಜನ ಕಿಕ್ಕಿರಿದು ಸೇರಿದ್ದರು.

ಪ್ರತಿಭಟನಕಾರರ ಆಕ್ರೋಶದ ನುಡಿಗಳನ್ನು ಜನ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ತಾಸುಗಟ್ಟಲೆ ನಿಂತುಕೊಂಡೇ ಆಲಿಸಿದರು. ಸಂತೆ ಕಟ್ಟೆಯ ಬಳಿ, ಮೂರು ಮಾರ್ಗದ ಬಳಿ, ಬಸ್‌ನಿಲ್ದಾಣದ ಬಳಿ ಅಳವಡಿಸಿದ್ದ ಎಲ್‌ಇಡಿ ಪರದೆಗಳ ಮೂಲಕವು ಪ್ರಮುಖರ ಭಾಷಣಗಳನ್ನು ವೀಕ್ಷಿಸಿದರು. ಮಂಗಳೂರು ಕಡೆಗಿನ ರಸ್ತೆಯಲ್ಲಿ ಸಂತೆಕಟ್ಟೆವರೆಗೆ ಹಾಗೂ ಉಜಿರೆ ಕಡೆಯ ರಸ್ತೆಯಲ್ಲಿದ ಲಾಯಿಲವರೆಗೆ ಧ್ವನಿವರ್ಧಕದ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರತಿಭಟನೆಗೆ ಅವಕಾಶ ನೀಡದ ಜಿಲ್ಲಾಡಳಿತದ ವಿರುದ್ಧ ಹಾಗೂ ಈ ಕುರಿತು ಒತ್ತಡ ಹಾಕಿದ ರಾಜಕೀಯ ಮುಖಂಡರ ವಿರುದ್ಧ ಪ್ರತಿಭಟನಕಾರರು ಕಿಡಿಕಾರಿದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>