ಮಹಿಮಾಸಾಗರ್ ಮುನಿಮಹಾರಾಜರ ಮಹಿಮೆಯಿಂದಲೇ ನಾವು ಬದುಕುಳಿದೆವು!

ವೇಣೂರು, ಮೇ 5: ಭಾರತ ದೇಶ ಇದುವರೆಗೆ ನೋಡಿರದಂತಹ ರೈಲು ದುರಂತವೊಂದನ್ನು ಕಂಡಿದೆ. ಒಡಿಶಾ ಬಾಲಾಸೂರ್ ಬಳಿ ತ್ರಿವಳಿ ರೈಲು ದುರಂತ ನಡೆದಿದ್ದು, ದೇಶವೇ ಬೆಚ್ಚಿಬಿದ್ದಿದೆ. ತ್ರಿವಳಿ ರೈಲು ಅಪಘಾತದಲ್ಲಿ ೨೭೫ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಮಿಕ್ಕಿ ಜನ ಗಾಯಗೊಂಡಿದ್ದಾರೆ.
ದ.ಕ., ಉಡುಪಿ, ಸಂಸೆ, ಕಳಸ, ಹೊರನಾಡು ಸುತ್ತಮುತ್ತದ ಜೈನಬಂಧುಗಳು ಮಹಿಮಾಸಾಗರ ಮುನಿ ಮಹಾರಾಜರ ಸಂಕಲ್ಪದಂತೆ ೧೦೮ ಜನ ಜಾರ್ಖಂಡ್ ರಾಜ್ಯದಲ್ಲಿರುವ ಶಿಖರ್ಜಿ ಪವಿತ್ರ ಸ್ಥಳಕ್ಕೆ ತೀರ್ಥಯಾತ್ರೆಗೆ ಹೊರಟಿದ್ದರು. ಅದರಲ್ಲಿ ವೇಣೂರಿನ ಆಶಾಲತಾ ಜೈನ್, ಮಮತಾ ಜೈನ್ ಹಾಗೂ ದೀಪಾಶ್ರೀ ಜೈನ್ ಕತ್ತೋಡಿ ಅವರು ಹೊರಟಿದ್ದರು.
ಯಾತ್ರೆ ಮತ್ತು ಆ ಮಹಾ ದುರಂತ ಮತ್ತು ಘಟನೆಯಿಂದ ಪಾರಾದ ಬಗ್ಗೆ ಯಾತ್ರಿಗಳಲ್ಲಿ ಓರ್ವರಾದ ದೀಪಾಶ್ರೀ ಜೈನ್ ಕತ್ತೋಡಿ ಅವರು ತನ್ನ ಅನುಭವವನ್ನು ಯಾತ್ರೆಯ ಮಧ್ಯೆ ಬಿಡುವು ಮಾಡಿಕೊಂಡು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ಜತೆ ಹಂಚಿಕೊಂಡಿದ್ದಾರೆ, ಅವರ ಯಾತ್ರೆಯ ಅನುಭವ ಕಥನ ಇಲ್ಲಿದೆ…..

ನಾವು ಮೇ 31ರಂದು ಕಳಸಕ್ಕೆ ತೆರಳಿ ಅಲ್ಲಿಯ ಬಸದಿಯಲ್ಲಿ ಪೂಜೆ ಸಲ್ಲಿಸಿ ಸಂಜೆ ಸುಮಾರು 6-30ಕ್ಕೆ ಎರಡು ಬಸ್‌ಗಳಲ್ಲಿ ಬೆಂಗಳೂರಿಗೆ ಹೊರಟೆವು. ಮರುದಿನ ಜೂ.1 ರ ಮುಂಜಾನೆ 4-00ರ ಸುಮಾರಿಗೆ ಬೆಂಗಳೂರಿನ ಪಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣಕ್ಕೆ ತಲುಪಿ ಅಲ್ಲಿ ವಿಶ್ರಾಂತಿ ಪಡೆದು ಬೆಳಗ್ಗಿನ ಉಪಹಾರ ಮುಗಿಸಿದೆವು. ಬೆಳಿಗ್ಗೆ ಸುಮಾರು 10 ಗಂಟೆಗೆ ಕೊಲ್ಕತ್ತ ರೈಲಿಗೆ ತಯಾರಾದೆವು. ಆದರೆ ರೈಲು 2 ಗಂಟೆ ವಿಳಂಬವಾದ ಹಿನ್ನೆಲೆಯಲ್ಲಿ 12 ಗಂಟೆಗೆ ರೈಲು ಬಂದಿದ್ದು, ಕೊನೆಯ ಮೂರು ಬೋಗಿಗಳಲ್ಲಿ ನಾವು 110 ಮಂದಿ ಕುಳಿತುಕೊಂಡೆವು. ರೈಲು ಮುಂದಕ್ಕೆ ಚಲಿಸಿತು. ಈ ವೇಳೆ ಅಂತದ್ದೊಂದು ದೇಶ ತಲ್ಲಣಗೊಳ್ಳುವ ಭೀಕರದುರಂತ ಸಂಭವಿಸಲಿದೆ ಅನ್ನುವುದು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ವಿಶಾಖಪಟ್ಟಣ ತಲುಪಿದಾಗ ಅಲ್ಲೊಂದು ಆದ ಬದಲಾವಣೆ ನಮ್ಮನ್ನು ಇಂದು ಜೀವಂತ ಇರಿಸಿದೆ ಎನ್ನುತ್ತಾರೆ ದೀಪಾಶ್ರೀ ಜೈನ್ ಕತ್ತೋಡಿಯವರು. ಹಾಗಾದರೆ ಆ ಬದಲಾವಣೆ ಏನು? ಮುಂದಕ್ಕೆ ಓದಿ……

ದೊಡ್ಡದೊಂದು ಶಬ್ದದೊಂದಿಗೆ ರೈಲು ಒಮ್ಮಿಂದೊಮ್ಮೆಲೆ ಅಲುಗಾಡಿತು. ನಿಂತಿದ್ದವರೆಲ್ಲ ಆಯತಪ್ಪಿ ಬಿದ್ದರು!

ಬೆಂಗಳೂರಿನ ಪಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದಿಂದ ಹೊರಟ ನಮ್ಮ ಹೌರಾ ಸೂಪರ್ ಫಾಸ್ಟ್ ರೈಲು ಜೂ. 2ರಂದು ಮಧ್ಯಾಹ್ನ ವಿಶಾಖಪಟ್ಟಣ ತಲುಪಿತು. ಅಲ್ಲಿ ಮುಂದಿದ್ದ ರೈಲಿನ ಇಂಜಿನನ್ನು ಕಳಚಿದರು. ಮತ್ತು ನಮ್ಮ ರೈಲಿನ ಹಿಂದಿನ ಭಾಗಕ್ಕೆ ಇಂಜಿನನ್ನು ಅಳವಡಿಸಿದರು. ಆಗ ನಾವು ಸ್ವಾಭಾವಿಕವಾಗಿ ಮುಂದಿನ ಮೂರನೇ ಬೋಗಿಯಲ್ಲಿರುವಂತಾಯಿತು. ರೈಲು ಮತ್ತೆ ಮುಂದಕ್ಕೆ ಚಲಿಸಿತು… ಸಂಜೆ 7 ಗಂಟೆ ಆಗಿರಬಹುದು. ದೊಡ್ಡದೊಂದು ಶಬ್ದದೊಂದಿಗೆ ರೈಲು ಒಮ್ಮಿಂದೊಮ್ಮೆಲೆ ಅಲುಗಾಡಿತು. ನಿಂತಿದ್ದವರೆಲ್ಲ ಆಯತಪ್ಪಿ ಬಿದ್ದರು. ರೈಲು ಕೆಲವೇ ಕ್ಷಣದಲ್ಲಿ ನಿಂತಿತು! ನಾವೆಲ್ಲ ಗಾಭರಿಗೊಂಡೆವು. ಒಬ್ಬರಿಗೊಬ್ಬರು ಎಲ್ಲಿದ್ದೇವೆ, ಏನಾಯಿತು ಏನಾಯಿತು ಎಂದು ಕೇಳತೊಡಗಿದೆವು. ಬಳಿಕ ಒಡಿಶಾದ ಬಾಲಾಸೂರ್ ತಲುಪಿದ್ದೇವೆ ಎಂದು ಗೊತ್ತಾಯಿತು. ಕೆಲವರು ರೈಲಿನಿಂದ ಇಳಿದು ಹಿಂಬದಿಗೆ ಓಡಲು ಆರಂಭಿಸಿದರು. ಸ್ಥಳೀಯ ಊರಿನವರು ಓಡೋಡಿ ಹೋಗುತ್ತಿರುವುದು ಕಾಣಿಸುತಿತ್ತು. ಒಂದೆಡೆ ಕತ್ತಲು ಮತ್ತೊಂದೆಡೆ ನಿರ್ಜನ ಪ್ರದೇಶ… ನಾವೂ ಇಳಿದು ಹೋಗಲು ಮುಂದಾದಾಗ ನಮ್ಮವರು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಯಾರೂ ಇಳಿಬೇಡಿ ಎಂದು ಸೂಚಿಸಿದರು. ನಾವು ಆತಂಕದಲ್ಲೇ ಕುಳಿತುಕೊಂಡೆವು. ಬಳಿಕ ಗೊತ್ತಾಯಿತು ಮಹಾ ದುರಂತವೊಂದು ನಡೆದಿದೆ ಎಂದು! ದುರಂತದ ಗಂಭೀರತೆ ತಿಳಿದು ದುಖಿಃತರಾದೆವು. ಕೆಲವು ನಮ್ಮವರು ಅಲ್ಲಿಗೆ ತೆರಳಿ ನೀರಿನ ವ್ಯವಸ್ಥೆ ಮಾಡಿದರು. ಆಗ ರೈಲಿನಲ್ಲಿದ್ದ ನೂರಾರು ಜನರ ನೀರಿನ ಬಾಟಲಿಗಳು ಖಾಲಿಯಾಯಿತು. ಈ ಮಧ್ಯೆ ಟಿ.ವಿ.ಯೋ… ವೆಬ್‌ಸೈಟ್‌ಗಳಲ್ಲೋ.. ವಿಚಾರ ತಿಳಿದ ಮನೆಗಳಿಂದ ನಮ್ಮವರಿಗೆ ಕರೆ ಬರಲು ಶುರುವಾಯಿತು. ಯಾರಲ್ಲಿ ನೀರಿದೆ…. ಯಾರಲ್ಲಿ ನೀರಿದೆ… ಎಂದು ಕುಡಿಯುವ ನೀರಿಗೆ ಪರದಾಡುವಂತಾಯಿತು.
ಆಗ ರೈಲಿನಲ್ಲಿದ್ದ ಕೆಲವರು ನಮ್ಮೆಲ್ಲರ ಖಾಟಿ ಬಾಟಲಿಗಳನ್ನು ಸಂಗ್ರಹಿಸಿ ಪರಿಸರದ ಮನೆಗಳಿಂದ ನೀರು ಸಂಗ್ರಹಿಸಿ ನಾವು ನೋವಿನಲ್ಲಿ ಪರದಾಡುತ್ತಿದ್ದ ಮಂದಿಗೆ ನೀರು ಪೂರೈಸಿದರು.
ಮಧ್ಯರಾತ್ರಿ 11 , 12 ಗಂಟೆ ಆಗಿರಬಹುದು, ಹಿಂದಿನ ಬೋಗಿಯಲ್ಲಿದ್ದ ಸಣ್ಣಪುಟ್ಟ ಗಾಯವಾದವರು ನಮ್ಮ ಬೋಗಿಕಡೆ ಬರಲಾರಂಬಿಸಿದರು. ನಾವು ಅವರನ್ನು ವಿಚಾರಿಸಿ ನಮ್ಮ ತುರ್ತು ಚಿಕಿತ್ಸೆ ಬಾಕ್ಸ್‌ನಲ್ಲಿದ್ದ ಬ್ಯಾಂಡೇಡ್‌ಗಳನ್ನು ನೀಡಿದೆವು. ಅವರ ಬಟ್ಟೆ ಬರೆಗಳು ರಕ್ತಸಿಕ್ತವಾಗಿತ್ತು. ನೋವು ಮತ್ತು ಘಟನೆಯ ಭೀಕರತೆಯನ್ನು ಪ್ರತ್ಯಕ್ಷ ಕಂಡಿದ್ದ ಅವರು ಭಯಭೀತರಾಗಿ ಅಳುತ್ತಿದ್ದರು. ನಮ್ಮಲ್ಲಿದ್ದ ನೋವಿನ ಮಾತ್ರೆಗಳನ್ನು ಕೊಟ್ಟೆವು. ನಮ್ಮದು 12 ದಿನದ ತೀರ್ಥಯಾತ್ರೆಯಾದುದರಿಂದ ಎಲ್ಲಾ ಟೇಬ್ಲೆಟ್ ಕಿಟ್‌ಗಳು ನಮ್ಮಲ್ಲಿತ್ತು. ನಮ್ಮಲ್ಲಿದ್ದ ತಿಂಡಿ, ಫ್ರುಟ್ಸ್‌ಗಳನ್ನು ಗಾಯಾಳುಗಳಿಗೆ ತಿನ್ನಲು ಕೊಟ್ಟೆವು. ಅವರಿಗೆ ಮಲಗಲು ನಮ್ಮ ಸೀಟನ್ನು ಬಿಟ್ಟುಕೊಟ್ಟೆವು. ಹೀಗೆ ಚಿಂತಿಸುತ್ತಾ ನಾವು ಕಾಲ ಕಳೆಯುತ್ತಿದ್ದರೆ ನಮ್ಮ ಕೆಲವೇ ಹಂತರದಲ್ಲಿ ನಡೆದಿದ್ದ ಮಹಾದುರಂತದ ರಕ್ಷಣಾ ಕಾರ್ಯಾಚರಣೆ ಬಹುವೇಗದಲ್ಲಿ ನಡೆಯುತ್ತಿತ್ತು.
ಮಧ್ಯರಾತ್ರಿ ಸುಮಾರು 1-30ರ ಸುಮಾರಿಗೆ ನಜ್ಜುಗುಜ್ಜಾದ ನಮ್ಮ ರೈಲಿನ ಹಿಂದಿನ ಮೂರು ಬೋಗಿಯನ್ನು ಕಳಚಿ ನಿಧಾನಗತಿಯಲ್ಲಿ ಸುರಕ್ಷಿತವಾಗಿದ್ದ ಪ್ರಯಾಣಿಕರನ್ನು ಹೊತ್ತು ನಮ್ಮ ಹೌರಾ ಸೂಪರ್ ಫಾಸ್ಟ್ ಕೊಲ್ಕತ್ತಕ್ಕೆ ಹೊರಟಿತು.

ಕೊಲ್ಕತ್ತಕ್ಕೆ ಬಂದು ತಲುಪಿದಾಗ ರೈಲ್ವೇ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಇಲಾಖೆಯವರು, ಪೊಲೀಸರು, ಮೀಡಿಯಾದವರು ನಿಂತಿದ್ದರು. ನಾವು ರೈಲಿನಿಂದ ಇಳಿಯುತ್ತಿದ್ದಂತೆ ಮೀಡಿಯಾದವರು ನಮ್ಮನ್ನು ಇಂಟರ್‍ಯೂ ಮಾಡಲು ಶುರು ಮಾಡಿದರು. ಅಲ್ಲಿ ನಮಗೆ ನ್ಯೂರೋ ದವರಿಂದ ಫುಡ್ ಕಿಟ್ ಸಿಕ್ಕಿತು. ಅನ್ನ ನೀರಿಲ್ಲದೆ ಆತಂಕದಲ್ಲಿದ್ದ ನಮಗೆ ಫುಡ್ ಗ್ಲುಕೋಸ್ ನೀಡಿದಂತಾಯಿತು. ನಾವು 9 ಗಂಟೆಗೆ ಕೊಲ್ಕತ್ತ ತಲುಪಬೇಕಿತ್ತು. ಆ ಮಹಾದುರಂತದಿಂದ ಕೊಲ್ಕತ್ತಾದಿಂದ ನಮಗೆ ಶಿಖರ್ಜಿಗೆ ತೆರಳುವ ರೈಲು ತಪ್ಪಿತು. ಹಾಗಾಗಿ ನಮ್ಮವರು ಕಲ್ಕತ್ತದಿಂದ ಮುಂದೆ ಇಖರ್ಜಿಗೆ ತಲುಪಲು 3 ಬಸ್ಸಿನ ವ್ಯವಸ್ಥೆ ಮಾಡಿದರು. ಅಲ್ಲಿಂದ ಹೊರಟ ನಾವು ಜೂ.3ರ ರಾತ್ರಿ ಸುಮಾರು ಒಂದು ಗಂಟೆಯ ಸುಮಾರಿಗೆ ಇಖರ್ಜಿಯನ್ನು ಸುರಕ್ಷಿತವಾಗಿ ತಲುಪಿದೆವು. ನಮ್ಮ ಮಹಿಮಾಸಾಗರ್ ಮುನಿಮಹಾರಾಜರ ಮಹಿಮೆಯಿಂದ ಬದುಕುಳಿದು ಈ ಪವಿತ್ರ ಕ್ಷೇತ್ರದ ದರ್ಶನ ಮಾಡುವಂತಾಯಿತು. ಜೂ. 4ರಂದು ಅಲ್ಲಿದ್ದ ಎಲ್ಲಾ ಮುನಿಮಹಾರಾಜರುಗಳು ನಮ್ಮನ್ನು ಸ್ವಾಗತಿಸಿ ಗದ್ಗತೀತರಾದರು!. ಆ ಭಾವನಾತ್ಮಕ ಕ್ಷಣದಲ್ಲಿ ನಮ್ಮ ಕಣ್ಣಂಚಿನಿಂದಲೂ ನೀರು ಹರಿಯಲಾರಂಭಿಸಿತು. ನಾವು ಶ್ರದ್ಧಾಭಕ್ತಿಯಿಂದ ಯಾತ್ರೆಯನ್ನು ಮುಂದುವರಿಸುತ್ತಿದ್ದೇವೆ.

ಸಲ್ಲೇಖನ ವ್ರತ ಸ್ವೀಕರಿಸುವುದಾಗಿ ಸಂಕಲ್ಪ ತೊಟ್ಟಿದ್ದ ಮುನಿಶ್ರೀಗಳು!
ಘಟನೆಯ ವಿಚಾರವನ್ನು ತಕ್ಷಣಕ್ಕೆ ತಿಳಿದುಕೊಂಡ ಸಾಗರಮುನಿಮಹಾರಾಜರು ಸರಿಸುಮಾರು ಒಂದೂವರೆ ದಿನಗಳ ಕಾಲ ಒಂದು ಹನಿ ನೀರನ್ನೂ ಮುಟ್ಟಿಲ್ಲವಂತೆ. ನಮ್ಮಲ್ಲಿಗೆ ಹೊರಟಿರುವ ಒಬ್ಬ ಯಾತ್ರಾತ್ರಿಗಳಿಗೆ ಅಪಾಯವಾದರೆ ತಾನು ಸಲ್ಲೇಖನ ವ್ರತ ಸ್ವೀಕರಿಸುವುದಾಗಿ ಸಂಕಲ್ಪ ತೊಟ್ಟಿದ್ದರಂತೆ. ಇಂದು ನಾವು ಸುರಕ್ಷಿತವಾಗಿ ಆ ಮಹಾದುರಂತದದಿಂದ ಪವಾಢಸದೃಶವಾಗಿ ಪಾರಾಗಿದ್ದೇವೆ ಎಂದರೆ ಮಹಿಮಸಾಗರ ಮುನಿಮಹಾರಾಜರ ಮಹಿಳೆ ಹಾಗೂ ನಮ್ಮೆಲ್ಲರ ಪ್ರಾರ್ಥನೆಯೇ ಕಾರಣ ವೆನ್ನುತ್ತಾರೆ ಕತ್ತೋಡಿ ದೀಪಾಶ್ರೀ ಜೈನ್!

ಬೆಂಕಿಪೊಟ್ಟಣದಂತೆ ಬೋಗಿಗಳು ಉರುಳಿ ಬಿದ್ದಿದ್ದವು!
ಶುಕ್ರವಾರ ಸಂಜೆ ನಮ್ಮ ಹೌರಾ ಸೂಪರ್ ಫಾಸ್ಟ್ ರೈಲು ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಸಂಚರಿಸುತ್ತಿತ್ತು. ಪಕ್ಕದ ಹಳಿಯಲ್ಲಿ ಸರಕು ಸಾಗಣೆ ರೈಲು ಸಂಚರಿಸುತ್ತಿತ್ತು. ನಮ್ಮ ರೈಲು ಹಳಿಯಲ್ಲಿ ತಿರುವು ಪಡೆದುಕೊಂಡು ಮುಂದೆ ಸಾಗಿದ ಕೆಲವೇ ಕ್ಷಣಗಳಲ್ಲಿ ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯೊಡೆಯಿತು. ಪರಿಣಾಮ ೨೦ ಬೋಗಿಗಳು ಹಳಿ ತಪ್ಪಿದ್ದವು. ಅಕ್ಕಪಕ್ಕದ ಹಳಿಗಳ ಮೇಲೆ ಬೆಂಕಿಪೊಟ್ಟಣದಂತೆ ಬೋಗಿಗಳು ಉರುಳಿ ಬಿದ್ದವು. ಆ ಸಂದರ್ಭ ನಮ್ಮ ಹೌರಾ ಸೂಪರ್ ಫಾಸ್ಟ್ ರೈಲಿನ ಕೊನೆಯ ಮೂರು ಬೋಗಿಗಳ ಮೇಲೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಉರುಳಿ ಬಿದ್ದಿದ್ದರಿಂದ ನಮ್ಮ ರೈಲಿನ ಹಲವು ಪ್ರಯಾಣಿಕರೂ ಪ್ರಾಣ ಕಳೆದುಕೊಳ್ಳವಂತಾಗಿದೆ.

  • ಕತ್ತೋಡಿ ದೀಪಾಶ್ರೀ ಜೈನ್, ವೇಣೂರಿನ ಯಾತ್ರಿ

Check Also

BREAKING : ಶಿವಮೊಗ್ಗದಲ್ಲಿ ಎರಡು ಕಾರುಗಳ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೆ 3 ಸಾವು ಮೂವರು ಗಂಭೀರ

ಶಿವಮೊಗ್ಗ : ಇಂದು ಶಿವಮೊಗ್ಗದ ಲಯನ್ ಸಫಾರಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, …

Leave a Reply

Your email address will not be published. Required fields are marked *

You cannot copy content of this page.