ರಾಜ್ಯಾದ್ಯಂತ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಂದು ಮಂಗಳೂರಿನಲ್ಲಿ ಐದನೇ ಭರವಸೆ ಘೋಷಿಸಿದ ಕಾಂಗ್ರೆಸ್!
ಮಂಗಳೂರು, ಏಪ್ರಿಲ್ 27: ಮಂಗಳೂರು ಕಾಂಗ್ರೆಸ್ ಸಮಾವೇಶದಲ್ಲಿ ಮಹಿಳೆಯರಿಗಾಗಿ ಕಾಂಗ್ರೆಸ್‌ನ ಐದನೇ ಭರವಸೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘೋಷಿಸಿದ್ದು, ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನದಲ್ಲಿ ಈ ಯೋಜನೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ನಾಲ್ಕು ಭರವಸೆಗಳನ್ನು ಸರ್ಕಾರ ಬಂದ ಮೊದಲ ದಿನದಲ್ಲೇ ಅನುಷ್ಠಾನ ಮಾಡುತ್ತೇವೆ. ಪ್ರಧಾನಿಯವರಿಗೆ ಸ್ಪಷ್ಟವಾಗಿ ಹೇಳುತ್ತೇನೆ. ಕರ್ನಾಟಕದಲ್ಲಿ ನಾವು ಘೋಷಿಸಿದ ನಾಲ್ಕು ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತನ್ನಿ. ಒಂದೇ ಒಂದು ಭರವಸೆಯನ್ನು ಮೋದಿ ಅನುಷ್ಠಾನ ಮಾಡಿಲ್ಲ. ಬದಲಾಗಿ ಅದಾನಿಗೆ ವಿಮಾನ ನಿಲ್ದಾಣ, ಬಂದರುಗಳನ್ನು ನೀಡಿದ್ದಾರೆ. ಬಡವರಿಗೆ ನೀಡಿದ ಭರವಸೆಯನ್ನು ಅನುಷ್ಠಾನ ಮಾಡಲ್ಲ ಎಂದು ಕಿಡಿಕಾರಿದ್ದಾರೆ.
ಮಂಗಳೂರು ಜೊತೆ ನನಗೆ ಹಳೆಯ ಸಂಬಂಧ ಇದೆ. ಇಲ್ಲಿನ ಬಂದರನ್ನು ಇಂದಿರಾ ಗಾಂಧಿ ಮಾಡಿದ್ದರು. ಮಂಗಳೂರು ವಿಮಾನ ನಿಲ್ದಾಣ, ಕೈಗಾರಿಕೆಗಳು ಕೂಡಾ ಕಾಂಗ್ರೆಸ್ ಸರ್ಕಾರದ ಕೊಡುಗೆ. ಕರಾವಳಿಯ ಹೆಮ್ಮೆಯ ಬ್ಯಾಂಕ್ ಗಳನ್ನು ವಿಲೀನ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಜಯಗಳಿಸಲಿದೆ. ಇದನ್ನು ಯಾರೂ ನಿಲ್ಲಿಸಲು ಸಾಧ್ಯವೇ ಇಲ್ಲ. ಕಾಂಗ್ರೆಸ್ 150 ಸೀಟುಗಳನ್ನು ಗೆಲ್ಲಲಿದೆ. ಬಿಜೆಪಿ 40% ಸರ್ಕಾರ ಹಾಗಾಗಿ ಅವರಿಗೆ 40 ಸೀಟು ಮಾತ್ರ ನೀಡಿ ಎಂದು ವ್ಯಂಗ್ಯವಾಡಿದ್ದಾರೆ.
ಕಳ್ಳತನದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಭ್ರಷ್ಟಾಚಾರದ ಹಣದಲ್ಲಿ ಶಾಸಕರನ್ನು ಖರೀದಿ ಮಾಡಿದ್ದಾರೆ. ಎಲ್ಲವನ್ನೂ ಕಳ್ಳತನ ಮಾಡೋದು ಇವರ ಹವ್ಯಾಸವಾಗಿದೆ. ಬಿಜೆಪಿ ಅಧ್ಯಕ್ಷ ಕರ್ನಾಟಕವನ್ನು ಮೋದಿ ಕೈಯಲ್ಲಿ ಕೊಡಿ ಅಂತಾ ಹೇಳುತ್ತಾರೆ. ಈಗಲೂ ಕರ್ನಾಟಕ ಬಿಜೆಪಿ ಕೈಯಲ್ಲೇ ಇದೆ. ಬಿಜೆಪಿಯವರು ಒಳ್ಳೆಯ ಅಭಿವೃದ್ಧಿಗಾಗಿ ಕರ್ನಾಟಕವನ್ನು ಕೊಡಿ ಅಂತಾ ಹೇಳುತ್ತಾರೆ. ಎಲ್ಲಾ ವಿಚಾರದಲ್ಲಿ 40% ಭ್ರಷ್ಟಾಚಾರ ನಡೆದಿದೆ ಎಂದರು.
ಇನ್ನು ಮುಖ್ಯಮಂತ್ರಿ ಖುರ್ಚಿ ಎರಡೂವರೆ ಸಾವಿರ ಕೋಟಿ ಖರೀದಿಯಾಗುತ್ತದೆ ಅಂತಾ ಬಿಜೆಪಿಯವರೇ ಹೇಳಿದ್ದಾರೆ. ಗುತ್ತಿಗೆದಾರ ಸಂಘ ಪ್ರಧಾನಿಗೆ 40% ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿ ಪತ್ರ ಸ್ವೀಕರಿಸಿಲ್ಲ, ಉತ್ತರವನ್ನು ಕೊಟ್ಟಿಲ್ಲ. ಎಂಟು ಕೋಟಿ ರೂಪಾಯಿ ಶಾಸಕರ ಮಗನ ಮನೆಯಲ್ಲಿ ಸಿಕ್ಕಿದೆ. ಪೊಲೀಸ್ ನೇಮಕಾತಿ, ಪ್ರೊಪೆಸರ್ ನೇಮಕಾತಿ ಸೇರಿದಂತೆ ಎಲ್ಲದರಲ್ಲಿ ಹಗರಣ ನಡೆದಿದೆ. ಒಂದು ಕಡೆ ಭ್ರಷ್ಟಾಚಾರ, ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
source – oneindia