ಮಂಗಳೂರು: ತುಳುನಾಡಿನ ಕಾಂತಾರ ಸಿನಿಮಾ ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡುತ್ತಿದೆ. ಇದರಿಂದಾಗಿ ಈ ಬಾರಿ ತುಳುನಾಡಿನ ಕಂಬಳ, ಕೋಲ, ನೇಮಗಳಿಗೆ ಇನ್ನಿಲ್ಲದ ಮಹತ್ವ ಬಂದಿದೆ. ಆದರೆ ಇಲ್ಲಿನ ಯಕ್ಷಗಾನ, ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್‌ನ ಶಬ್ಧಮಾಲಿನ್ಯ ನಿಯಮ ನಿರ್ಬಂಧ ಆದೇಶದಿಂದ ಕರಿಛಾಯೆ ಆವರಿಸಿದೆ. ಇದರಿಂದ ಮೇಳದ ಯಜಮಾನರು, ಕಂಬಳ ಸಂಘಟಕರು ಗೊಂದಲದಲ್ಲಿ ಸಿಲುಕಿದ್ದಾರೆ.
ಸುಪ್ರೀಂ ಕೋರ್ಟ್ ಶಬ್ಧಮಾಲಿನ್ಯ ನಿಯಮವನ್ನು ಎತ್ತಿಹಿಡಿದಿದ್ದು, 2005ರ ನಿಯಮವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿದೆ. ಈ ನಿಯಮದ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧವಿದ್ದು, ಇದು ಕರಾವಳಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ತೊಂದರೆಯಾಗಿದೆ.
ರಾಜ್ಯದಲ್ಲಿ ಧ್ವನಿವರ್ಧಕ ಬಳಸಲು ಕೆಲವು ನಿಯಮ ವಿಧಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ಧಕ ಬಳಸಬಹುದಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ಮತ್ತು ರಾತ್ರಿ 10 ಡೆಸಿಬಲ್ ನಷ್ಟು ಬಳಕೆಗೆ ಅವಕಾಶವಿದೆ. ವಾಣಿಜ್ಯ ಪ್ರದೇಶಗಳಲ್ಲಿ ಹಗಲಿನಲ್ಲಿ 65 ಡೆಸಿಬಲ್ ಮತ್ತು ರಾತ್ರಿ 55 ಡೆಸಿಬಲ್ ಮಟ್ಟ ಇರಬೇಕು. ವಸತಿ ವಲಯಗಳಲ್ಲಿ, ಕಟ್ಟಡ ಮಟ್ಟವು ಹಗಲಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿಯಲ್ಲಿ 45 ಡೆಸಿಬಲ್ ಬಳಸಬಹುದು. ಶಾಂತ ವಲಯದಲ್ಲಿ ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿ 40 ಡೆಸಿಬಲ್‌ನಷ್ಟು ಶಬ್ಧಕ್ಕೆ ಅನುಮತಿ ನೀಡಲಾಗಿದೆ. ಈ ರೀತಿಯ ನಿಯಮಗಳನ್ನು ಪಾಲಿಸಿಕೊಂಡು ಯಕ್ಷಗಾನ, ಉತ್ಸವ, ಕಂಬಳ ನಡೆಸುವುದು ಕಷ್ಟ ಎನ್ನುತ್ತಾರೆ ಸಂಘಟಕರು.