December 23, 2024
elephant-attack

ಸುಬ್ರಹ್ಮಣ್ಯ: ಕಡಬ ತಾಲೂಕಿನಲ್ಲಿ ಕಾಡಾನೆ ಪತ್ತೆ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ. ನಿನ್ನೆಯೂ ಕಾರ್ಯಾಚರಣೆ ನಡೆದಿದ್ದು, ಸಾಕಾನೆಗಳಿಗೆ ವಿರಾಮ ನೀಡಲಾಗಿತ್ತು.

ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಯುವತಿ ಸಹಿತ ಇಬ್ಬರು ಕಾಡಾನೆ ದಾಳಿಗೆ ಬಲಿಯಾದ ಬೆನ್ನಲ್ಲೇ ಸ್ಥಳೀಯರ ಆಗ್ರಹದ ಮೇರೆಗೆ ಕಳೆದ ಮಂಗಳವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿದ್ದು, ಗುರುವಾರ ಒಂಟಿ ಸಲಗವನ್ನು ಸೆರೆ ಹಿಡಿದು ನಾಗರಹೊಳೆ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ. ಆದರೆ ತಾಲೂಕಿನಲ್ಲಿ ಇನ್ನೂ ಕೆಲವು ಕಾಡಾನೆಗಳು ಇರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಅವುಗಳನ್ನು ಸೆರೆ ಹಿಡಿಯುವ ಸಲುವಾಗಿ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ಇನ್ನು ಕಾಡಾನೆ ಸೆರೆಗಾಗಿ ದುಬಾರೆ ಶಿಬಿರದಿಂದ ಐದು ಸಾಕಾನೆಗಳನ್ನು ತರಿಸಲಾಗಿದ್ದು, ಈ ಪೈಕಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನು ಸೆರೆ ಹಿಡಿದ ಕಾಡಾನೆಯೊಂದಿಗೆ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಈ ಎರಡು ಸಾಕಾನೆಗಳನ್ನು ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ ಮೂರು ಸಾಕಾನೆಗಳಿಗೆ ಶುಕ್ರವಾರ ವಿರಾಮ ನೀಡಲಾಗಿತ್ತು. ಅದಕ್ಕಾಗಿ ಅವುಗಳನ್ನು ಪೇರಡ್ಕ ಬಳಿಯ ಶಿಬಿರದಿಂದ ನೆಟ್ಟಣದ ಕೇಂದ್ರೀಯ ಮರ ಸಂಗ್ರಹಣ ಘಟಕಕ್ಕೆ ಕರೆದೊಯ್ಯಲಾಗಿದೆ. ಆನೆಗಳ ಅನುಪಸ್ಥಿತಿಯಲ್ಲಿ ಸಿಬಂದಿಯೇ ಕಾಡಾನೆಗಳ ಪತ್ತೆ ಕಾರ್ಯಾಚರಣೆ ಮುಂದುವರಿಸಿದರು.

ಇನ್ನು ಗುಂಡ್ಯದ ಅರಣ್ಯ ಇಲಾಖೆ ನರ್ಸರಿಗೆ ಕಾಡಾನೆಗಳು ಗುರುವಾರ ರಾತ್ರಿ ದಾಳಿ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.