ಮಂಗಳೂರು: ಕೆಲಸದಲ್ಲಿ ನಿರತನಾಗಿದ್ದ ವೇಳೆ ಆಕಸ್ಮಿಕವಾಗಿ ವರ್ಕ್‌ಶಾಪ್‌ವೊಂದರ ಮೇಲ್ಛಾವಣಿಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಸಂಭವಿಸಿದೆ.
ನಗರದ ಎಕ್ಕೂರುಗುಡ್ಡೆ ನಿವಾಸಿ ವರುಣ್(25) ಮೃತಪಟ್ಟವರು. ವರುಣ್ ಅವರು ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ವರ್ಕ್‌ಶಾಪ್‌ನ ಮೇಲ್ಛಾವಣಿಯ ಶೀಟ್ ಮೇಲೆ ಸೋಲಾರ್ ಪ್ಯಾನಲ್‌ಗೆ ವಯರಿಂಗ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಶೀಟ್ ತುಂಡಾಗಿ ವರುಣ್ ಅವರು ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದಾರೆ.
ಸೂಕ್ತ ಸುರಕ್ಷತೆ ವಹಿಸಿಲ್ಲ ಎಂದು ಆರೋಪಿಸಿ ಗುತ್ತಿಗೆದಾರರ ವಿರುದ್ಧ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ವರುಣ್ ಅವರು ತಾಯಿ ಮತ್ತು ಇಬ್ಬರು ತಮ್ಮಂದಿರೊಂದಿಗೆ ವಾಸವಾಗಿದ್ದರು. ಓರ್ವ ತಮ್ಮ ಬೇಕರಿ ಕೆಲಸಕ್ಕೆ ಹೋಗುತ್ತಿದ್ದು ಇನ್ನೋರ್ವ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವರುಣ್ ಬಿಜೆಪಿಯ ಎಕ್ಕೂರು ಬೂತ್ ಕಾರ್ಯದರ್ಶಿಯಾಗಿಯೂ ಕ್ರಿಯಾಶೀಲರಾಗಿದ್ದರು.