ಉಡುಪಿ: ಈಗಿನ ಬಿಜೆಪಿ ಸರಕಾರ ಮಾಡಿರುವ ಕಾಮಗಾರಿಯ ಕಮಿಷನ್ ಅವ್ಯವಹಾರಗಳನ್ನು ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತತ್‌ಕ್ಷಣದಿಂದಲೇ ಸಮಗ್ರ ತನಿಖೆ ನಡೆಸಲಿದ್ದೇವೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಉಡುಪಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿನಯ್ ಕುಮಾರ್ ಸೊರಕೆ, ಬಿಜೆಪಿಯವರು ಬೆಲೆ ಏರಿಕೆ, ಭ್ರಷ್ಟಾಚಾರ, ಶೇ.40ರಷ್ಟು ಕಮಿಷನ್, ನೀರಾವರಿ ಸಮಸ್ಯೆ ಇದ್ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಸರಕಾರದ ಭ್ರಷ್ಟಾಚಾರ ಮತ್ತು ಶೇ.40ರಷ್ಟು ಕಮಿಷನ್ ಆರೋಪವನ್ನು ಜನರ ಮುಂದಿಡುವ ಎಲ್ಲ ಪ್ರಯತ್ನ ಮಾಡಲಿದ್ದೇವೆ ಎಂದರು. ಚುನಾವಣೆಗೆ ಎರಡು ತಿಂಗಳು ಬಾಕಿಯಿದ್ದು, ರಾಜ್ಯ ಸರಕಾರ ಚುನಾವಣೆಯಲ್ಲಿ ಮತ ಗಳಿಸುವ ಎಟಿಎಂ ತರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ದಿನಕ್ಕೊಂದು ಘೋಷಣೆ ಮಾಡುತ್ತಿದೆ. ಚುನಾವಣೆಯ ಹೊಸ್ತಿಲಿನಲ್ಲಿ ಘೋಷಣೆ ಮಾಡುವ ಯೋಜನೆಗಳಿಂದ ಯಾವುದೇ ಪ್ರಯೋಜನವಿಲ್ಲ. ಮೀಸಲಾತಿಯ ಹೆಚ್ಚಳದ ಹೆಸರಿನಲ್ಲಿ ಮೀಸಲಾತಿಯನ್ನು ತೆಗೆದು ಹಾಕಲು ಬಿಜೆಪಿ ಸರಕಾರ ಹುನ್ನಾರ ನಡೆಸುತ್ತಿದೆ ಎಂದು ಹೇಳಿದರು.