December 22, 2024
WhatsApp Image 2023-01-02 at 6.00.47 PM

ನ್ಯೂಯಾರ್ಕ್‌: ಮಾನವ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ‘ಹಸಿರು ಅಂತ್ಯಕ್ರಿಯೆ’ಗೆ ಅಮೆರಿಕ ನ್ಯೂಯಾರ್ಕ್‌ ರಾಜ್ಯ ಒಪ್ಪಿಗೆ ನೀಡಿದೆ. ಆ ಮೂಲಕ ಮಾನವನ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಿಕೊಟ್ಟ ಅಮೆರಿಕ ಆರನೇ ರಾಜ್ಯ ಎನಿಸಿಕೊಂಡಿದೆ.

ಈ ಕ್ರಿಯೆಯನ್ನು ‘ಹ್ಯೂಮನ್‌ ಕಾಂಪೋಸ್ಟಿಂಗ್‌’ ಎನ್ನಲಾಗುತ್ತದೆ.

ಒಬ್ಬ ವ್ಯಕ್ತಿ ಮೃತಪಟ್ಟ ಬಳಿಕ ಅವರ ದೇಹವನ್ನು ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸುವ ಕ್ರಿಯೆಗೆ ಹ್ಯೂಮನ್ ಕಾಂಪೋಸ್ಟಿಂಗ್‌ ಎನ್ನಲಾಗುತ್ತದೆ. ಬಳಿಕ ಆ ಮಣ್ಣನ್ನು ಸಸಿಗಳಿಗೆ ಗೊಬ್ಬರವನ್ನಾಗಿ ಬಳಕೆ ಮಾಡಲಾಗುತ್ತದೆ. ಇದು ಪ್ರಕೃತಿ ಸ್ನೇಹಿ ಪ್ರಕ್ರಿಯೆ.

2019ರಲ್ಲಿ ವಾಷಿಂಗ್ಟನ್‌ ಈ ‘ಹಸಿರು ಸಂಸ್ಕಾರ’ಕ್ಕೆ ಅನುಮತಿ ನೀಡಿದ ಮೊದಲ ರಾಜ್ಯವಾಗಿತ್ತು. ಬಳಿಕ ಕೊಲಾರಡೋ, ಒರಿಗನ್‌, ವೆರ್ಮೋಂಟ್‌ ಹಾಗೂ ಕ್ಯಾಲಿಫೋರ್ನಿಯಾ ಕೂಡ ಇದನ್ನು ಕಾನೂನುಬದ್ಧಗೊಳಿಸಿದ್ದವು.

ಸದ್ಯ ನ್ಯೂಯಾರ್ಕ್‌ ಕೂಡ ಹ್ಯೂಮನ್‌ ಕಾಂಪೋಸ್ಟಿಂಗ್‌ಗೆ ಅನುಮತಿ ಕೊಟ್ಟಿದೆ. ನ್ಯೂಯಾರ್ಕ್‌ ‌ಗೌವರ್ನರ್‌ ಕ್ಯಾತಿ ಹೋಚುಲ್‌ ಅವರು ಈ ಶಾಸನಕ್ಕೆ ಶನಿವಾರ ಸಹಿ ಹಾಕುವ ಮೂಲಕ ಕಾನೂನು ಮಾನ್ಯತೆ ನೀಡಿದ್ದಾರೆ.

ಹ್ಯೂಮನ್‌ ಕಾಂಪೋಸ್ಟಿಂಗ್‌ ಪ್ರಕ್ರಿಯೆ ಹೇಗೆ?

ಮೃತದೇಹವನ್ನು ಮುಚ್ಚಿದ ಪೆಟ್ಟಿಗೆಯಲ್ಲಿ ಇರಿಸಿ ಮರದ ತುಂಡುಗಳು, ಒಣಹುಲ್ಲು ಹಾಗೂ ಇನ್ನಿತರ ವಸ್ತುಗಳನ್ನು ಬಳಸಿ ದೇಹವನ್ನು ಮಣ್ಣಾಗಿ ಪರಿವರ್ತಿಸಲಾಗುತ್ತದೆ. ಸೂಕ್ಷ ಜೀವಿಗಳ ಪ್ರಕ್ರಿಯೆಯಿಂದ ದೇಹವು ಮಣ್ಣಾಗಿ ಪರಿವರ್ತನೆಗೊಳ್ಳುತ್ತದೆ.

ದೇಹವು ಮಣ್ಣಾಗಲು ಕೆಲವು ತಿಂಗಳುಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಬಳಿಕ ಅದರಲ್ಲಿ ಇರುವ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಲು ಬಿಸಿ ಮಾಡಲಾಗುತ್ತದೆ. ಬಳಿಕ ಅದನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಅದನ್ನು ಅವರು ಗೊಬ್ಬರವಾಗಿ ಬಳಸಿಕೊಳ್ಳುತ್ತಾರೆ.

ಪರಿಸರ ಸ್ನೇಹಿ ಪ್ರಕ್ರಿಯೆ

ಮೃತ ದೇಹವನ್ನು ಸುಡುವ ಹಾಗೂ ಹೂಳುವಂಥ ಸಾಂಪ್ರದಾಯಿಕ ಪ್ರಕ್ರಿಯೆಗಿಂತ ಹ್ಯೂಮನ್‌ ಕಾಂಪೋಸ್ಟಿಂಗ್‌ ಪ್ರಕ್ರಿಯೆ ಹೆಚ್ಚು ಪರಿಸರ ಸ್ನೇಹಿ ಎನ್ನುವುದು ವಿಜ್ಞಾನಿಗಳ ಅಭಿಮತ. ಸಾಂಪ್ರದಾಯಿಕ ಪ್ರಕ್ರಿಯೆಗಳಿಂದ ಉಂಟಾಗುವ ಟನ್‌ಗಳಷ್ಟು ಕಾರ್ಬನ್‌ ಹೊರಸೂಸುವಿಕೆ ಇದರಿಂದ ಇಲ್ಲವಾಗುತ್ತದೆ.

ಕಾರ್ಬನ್‌ ಡೈ ಆಕ್ಸೈಡ್‌ ಹೊರಸೂಸುವಿಕೆ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವೂ ಹೌದು. ಹ್ಯೂಮನ್‌ ಕಾಂಪೋಸ್ಟಿಂಗ್‌ ಪ್ರಕ್ರಿಯೆಯಲ್ಲಿ ಕಾರ್ಬನ್‌ ಹೊರಸೂಸುವಿಕೆ ಶೂನ್ಯವಾಗಿರಲಿದೆ.

ಶವಪೆಟ್ಟಿಗೆಯಲ್ಲಿ ಮೃತದೇಹ ಇಟ್ಟು ಹೂಳುವ ಸಾಂಪ್ರದಾಯಿಕ ಶವ ಸಂಸ್ಕಾರಕ್ಕೆ ಕಟ್ಟಿಗೆ, ಭೂಮಿ ಕೂಡ ಬೇಕು. ಹ್ಯೂಮನ್‌ ಕಾಂಪೋಸ್ಟಿಂಗ್‌ಗೆ ಅವೆಲ್ಲಾ ಬೇಕಿಲ್ಲ. ಅಲ್ಲದೇ ದೊಡ್ಡ ದೊಡ್ಡ ನಗರಗಳಲ್ಲಿ ಶವ ಹೂಳಲು ಭೂಮಿಯ ಕೊರತೆ ಕೂಡ ಇದೆ. ಆದರೆ ಈ ಪ್ರಕ್ರಿಯೆಯಲ್ಲಿ ಅದರ ತಲೆಬಿಸಿ ಇಲ್ಲ.

About The Author

Leave a Reply

Your email address will not be published. Required fields are marked *

You cannot copy content of this page.