ಚಾಮರಾಜನಗರ: ದೇವರೇ ನನ್ನ “ಮೂರ್ತಿ” ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು ಎಂದು ಪತ್ರ ಬರೆದು ದೇವರ ಹುಂಡಿಗೆ ಹಾಕಿರುವ ಅಪರೂಪದ ಪತ್ರ ಸಖತ್ ವೈರಲ್ ಆಗುತ್ತಿದೆ. ಹೌದು, ‘ದೇವರೇ ನನ್ನ ಮೂರ್ತಿ ಬಿಟ್ಟು ಬೇರೆ ಯಾರು ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು’ ಎಂದು ಪತ್ರದಲ್ಲಿ ಬರೆದು ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿಯ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಗೆ ಹಾಕಿ ದೇವರ ಮೊರೆ ಹೋಗಿದ್ದಾರೆ.
ಹುಂಡಿ ಎಣಿಕೆ ಕಾರ್ಯ ಮಾಡುವ ಸಂದರ್ಭದಲ್ಲಿ ಪತ್ರ ಸಿಕ್ಕಿದ್ದು, ಯುವತಿ ತಾನು ಪ್ರೀತಿ ಮಾಡಿದ ಯುವಕನೊಂದಿಗೆ ಮದುವೆಯಾಗುವ ಆಸೆಯೊಂದಿಗೆ ದೇವರಿಗೆ ಪ್ರಾರ್ಥನೆ ಮಾಡಿ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ ಎನ್ನಲಾಗಿದೆ.
ಮುಕ್ಕಡಹಳ್ಳಿಯ ಮಾಯಮ್ಮದೇವಮ್ಮ ದೇವಸ್ಥಾನದ ದೇವತೆಗೆ ಪ್ರೇಮಿಯೊಬ್ಬರು ಹರಕೆ ಕಟ್ಟಿಕೊಂಡು ಚೀಟಿಯೊಂದರಲ್ಲಿ ತನ್ನ ಹರಕೆಯನ್ನು ಬರೆದು ಹುಂಡಿಗೆ ಹಾಕಿದ್ದಾರೆ. ಇತ್ತೀಚೆಗಷ್ಟೇ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ, ದೇವರೆ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಸಿಕ್ಕಿತ್ತು. ಇದರ ಬೆನ್ನಲ್ಲೇ ಸದ್ಯ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಂದು ರೀತಿಯ ಪತ್ರ ಪತ್ತೆಯಾಗಿದೆ.
ಇಷ್ಟೇ ಅಲ್ಲದೇ, ಈ ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಪತ್ರವನ್ನೂ ವ್ಯಕ್ತಿಯೊಬ್ಬ ಹುಂಡಿಗೆ ಹಾಕಿದ್ದ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದುಕೊಂಡ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಅಲ್ಲದೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆಯಲ್ಲಿ ಒಟ್ಟು 7,61,641 ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಕಾಣಿಕೆ ಜೊತೆ ಸಿಕ್ಕ ಕೆಲವು ಪತ್ರಗಳು ಭಾರೀ ಸಂಚಲನ ಸೃಷ್ಟಿಸಿದ್ದವು.