ಉಡುಪಿ: ಉಡುಪಿಯ ಬ್ರಹ್ಮಾವರ ಹಾಗೂ ಕುಂದಾಪರದ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ಹಾಗೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿಜಯ ಕುಮಾರ್ ಶೆಟ್ಟಿ (28) ಎಂಬಾತ ಕಳ್ಳತನದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಯಾಗಿದ್ದಾನೆ.
ಈತನಿಂದ ಕೃತ್ಯಕ್ಕೆ ಬಳಸುತ್ತಿದ್ದ 30 ಸಾವಿರ ರೂ. ಮೌಲ್ಯದ ಕೆಎ-20-ಇಪಿ-6201ನೇ ಹೋಂಡಾ ಮ್ಯಾಟ್ರಿಕ್ಸ್ ಸ್ಕೂಟರ್, ಕಳವು ಮಾಡಿದ 4,64,700 ರೂ. ಮೌಲ್ಯದ ಚಿನ್ನಾಭರಣಗಳು, 2.080 ರೂ. ಮೌಲ್ಯದ ಬೆಳ್ಳಿ ನಾಣ್ಯಗಳು,9 ಸಾವಿರ ರೂ. ಮೌಲ್ಯದ 1 ಸೀರೆ, ಕಳವು ಮಾಡಿದ ಕಾಳುಮಣಸಿನ ಮಾರಾಟದಿಂದ ಪಡೆದ 84,000 ರೂ. ನಗದು, 2,800 ರೂ. ಮೌಲ್ಯದ ಒಂದು ಗ್ಯಾಸ್ ಸಿಲಿಂಡರ್‌ನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಲೆ ಬಾಳುವ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕಳ್ಳತನ ಪ್ರಕರಣ ನಡೆಸಿರುವುದು ಪತ್ತೆಯಾಗಿದೆ.
ಈ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 2, ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ 4, ಚಿಕ್ಕಮಂಗಳೂರು ಜಿಲ್ಲೆ ಎನ್ .ಆರ್ ಪುರ ಠಾಣೆಯಲ್ಲಿ 1, ಹರಿಹರ ಪೊಲೀಸ್ ಠಾಣೆಯಲ್ಲಿ 1, ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯಲ್ಲಿ 1, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ 2 ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ1 ಕಳವು ಪ್ರಕರಣ ದಾಖಲಾಗಿದ್ದವು. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಜಾಮೀನು ರಹಿತ ವಾರಂಟ್ ಕೂಡಾ ಜಾರಿಯಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಎಚ್. ಅವರ ಆದೇಶದಂತೆ ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.