May 9, 2026
WhatsApp Image 2026-05-09 at 1.06.11 PM

ಕನಕಪುರ: ನವೋದಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳಲ್ಲೇ ಅದೇ ಆಸ್ಪತ್ರೆಯ ನರ್ಸ್ ಕೂಡ ನೇಣಿಗೆ ಶರಣಾಗಿರುವುದು ಪಟ್ಟಣದಲ್ಲಿ ಆತಂಕ ಮತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನವೋದಯ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸರಸ್ವತಿ (45) ಮೃತಪಟ್ಟವರು. ಇವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಇದೇ ಆಸ್ಪತ್ರೆಯ ವೈದ್ಯರಾದ ಡಾ. ಚೇತನ್ ಟೆಂಕರ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಘಟನೆಯ ಆಘಾತ ಮಾಸುವ ಮುನ್ನವೇ ಈಗ ಆಸ್ಪತ್ರೆಯ ಹಿರಿಯ ನರ್ಸ್ ಸರಸ್ವತಿ ಅವರು ಜೀವ ತೊರೆದಿರುವುದು ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಸಂಶಯ ಮೂಡಿಸಿದೆ.

ಹಾರೋಹಳ್ಳಿ ತಾಲ್ಲೂಕಿನ ಗುಂಡನಗೊಲ್ಲಹಳ್ಳಿ ಗ್ರಾಮದ ಅವರು ನವೋದಯ ಆಸ್ಪತ್ರೆಯಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಜೊತೆಗೆ ಡಾ. ಚೇತನ್ ಅವರ ತಂದೆ–ತಾಯಿಯ ಆರೈಕೆದಾರರೂ ಆಗಿದ್ದರು. ಡಾ. ಚೇತನ್ ಮೇ 6ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ನಗರದ ಮುನ್ಸಿಪಲ್ ಹೈ ಸ್ಕೂಲ್ ಮೈದಾನದ ಬಳಿ ಇರುವ ತಮ್ಮ ಮನೆಯಲ್ಲಿ ವಾಸವಾಗಿದ್ದ ಡಾ. ಚೇತನ್ ಅವರ ಕುಟುಂಬ ಇತ್ತೀಚೆಗೆ ಚನ್ನಬಸಪ್ಪ ಲೇಔಟ್ ನಗರದಲ್ಲಿ ಮನೆ ಖರೀದಿ ಮಾಡಿತ್ತು. ಅಲ್ಲಿಗೆ ಕುಟುಂಬ ಸ್ಥಳಾಂತರವಾದ ಬಳಿಕ ಹಳೆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ವೈದ್ಯರ ಹಳೆ ಮನೆಯಲ್ಲಿ ವಾಸವಾಗಿದ್ದ ಸರಸ್ವತಿ ಅವರು, ಡಾ. ಚೇತನ್ ಹೊಸ ಮನೆಗೆ ಹೋದ ಬಳಿಕ ಬೇರೆ ಬಾಡಿಗೆ ಮನೆ ಮಾಡಿ ಸ್ಥಳಾಂತರಗೊಂಡಿದ್ದರು.

ಸರಸ್ವತಿ ಅವರು ಸಂಜೆ ಸುಮಾರು 6 ಗಂಟೆಗೆ ಡಾ. ಚೇತನ್ ಅವರ ಹಳೆ ಮನೆಗೆ ಬಂದು, ‘ತಮ್ಮ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಮನೆ ಬಾಡಿಗೆದಾರರಿಗೆ ಹೇಳಿ ಎರಡನೇ ಮಹಡಿಗೆ ಹೋಗಿದ್ದರು. ಮಹಡಿ ಮೇಲೆ ಹೋದ ಸರಸ್ವತಿ ಅವರು, ಒಂದು ಗಂಟೆಯಾದರೂ ವಾಪಸ್ ಕೆಳಗೆ ಬರಲಿಲ್ಲ. ಇದರಿಂದ ಅನುಮಾನಗೊಂಡ ಬಾಡಿಗೆ ಮನೆಯವರು ಮಹಡಿ ಮೇಲೆ ಹೋಗಿ ನೋಡಿದಾಗ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಈ ಎರಡು ಸಾವುಗಳ ನಡುವೆ ಏನಾದರೂ ಸಾಮ್ಯತೆ ಇದೆಯೇ ಅಥವಾ ವೃತ್ತಿಜೀವನದ ಒತ್ತಡ ಕಾರಣವೇ ಎಂಬ ಬಗ್ಗೆ ಕನಕಪುರ ಟೌನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ಪ್ರಸ್ತುತ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡೂ ಘಟನೆಗಳಿಗೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿ ವಿಚಾರಣೆ ನಡೆಸುತ್ತಿದ್ದೇವೆ. ಮೃತರ ಕುಟುಂಬದವರ ಹೇಳಿಕೆ ಪಡೆದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.