April 10, 2026
WhatsApp Image 2025-12-31 at 3.40.28 PM

ಐವರ್ನಾಡು ಗ್ರಾಮದ ಮಡ್ತಿಲದಲ್ಲಿ ಮಡ್ತಿಲ ಕುಟುಂಬದ ನೇಮೋತ್ಸವದ ಸಂದರ್ಭದಲ್ಲಿ ದೈವಧಾರಿಯು ನಿನಗೆ ಮಗು ಬೇಕಾ ಅಥವಾ ಜಾಗ ಬೇಕಾ.? ಎಂದು ಕೇಳಿ ಬೆದರಿಕೆ ಒಡ್ಡಿರುವುದಾಗಿ ಮಮತಾ ಭಾಸ್ಕರ ಮಡ್ತಿಲ ಎಂಬವರು ನೀಡಿರುವ ಪಿರ್ಯಾದಿಯನ್ನು ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸುಳ್ಯ ನ್ಯಾಯಾಲಯವು ಆದೇಶ ನೀಡಿದ ಮೇರೆಗೆ ಬೆಳ್ಳಾರೆ ಪೊಲೀಸರು ದೈವಧಾರಿ ಮೋಹನ ಮತ್ತು ದೈವದ ಮೂಲಕ ಆ ರೀತಿ ಬೆದರಿಕೆ ಒಡ್ಡಿಸಿದ ಆರೋಪಕ್ಕೊಳಗಾಗಿರುವ ಸಚಿನ್ ಮಡ್ತಿಲ ಎಂಬವರ ಮೇಲೆ ಏಪ್ರಿಲ್ 7 ರಂದು ಕೇಸು ದಾಖಲಿಸಿಕೊಂಡಿದ್ದಾರೆ.

ಕಳೆದ ಫೆಬ್ರವರಿ 24 ರಂದು ಘಟನೆ ನಡೆದಿದ್ದು ಶ್ರೀಮತಿ ಮಮತಾ ಭಾಸ್ಕರ ಮಡ್ತಿಲ ರವರು ಎಸ್ ಪಿ ಗೆ ಮತ್ತು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ಬೆಳ್ಳಾರೆ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆಸಿ ಹೇಳಿಕೆ ಪಡೆದುಕೊಂಡಿದ್ದರು. ಕೇಸು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಮಮತಾರವರು ವಿನಂತಿಸಿದಾಗ ನ್ಯಾಯಾಲಯದ ಮೂಲಕ ಆದೇಶ ಕೊಡಿಸುವಂತೆ ಪೊಲೀಸರು ತಿಳಿಸಿದ್ದರು. ಅದರಂತೆ ಮಮತಾರವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಕರಣದ ಅಹವಾಲನ್ನು ಆಲಿಸಿದ ನ್ಯಾಯಾಲಯವು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ನೀಡುವಂತೆ ಮಾರ್ಚ್ 26 ರಂದು ಪೊಲೀಸರಿಗೆ ಆದೇಶಿಸಿದೆ. ಅದರಂತೆ ಬೆಳ್ಳಾರೆ ಪೊಲೀಸರು ಒಂದನೇ ಆರೋಪಿ ಸಚಿನ್ ಮಡ್ತಿಲ ಮತ್ತು ಎರಡನೇ ಆರೋಪಿ ದೈವಧಾರಿ ಮೋಹನ್ ರವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಮಮತಾ ಭಾಸ್ಕರ ಮಡ್ತಿಲ ರವರು ನೀಡಿದ ದೂರಿನಲ್ಲಿ “ನನ್ನ ಗಂಡ ಭಾಸ್ಕರ ಮಡ್ತಿಲ ರಿಗೆ ಮತ್ತು ಸಚಿನ್ ಮಡ್ತಿಲ ಎಂಬವರಿಗೆ ಜಾಗದ ವಿಚಾರದಲ್ಲಿ ವ್ಯಾಜ್ಯವು ಸುಳ್ಯ ಸಿವಿಲ್ ನ್ಯಾಯಾಲಯದಲ್ಲಿದ್ದು 49/23-24 ರಲ್ಲಿ ವಿಚಾರಣೆಯಲ್ಲಿರುತ್ತದೆ. ಹೀಗಿರುತ್ತಾ ದಿನಾಂಕ 24-02-2026 ರಂದು ನನ್ನ ಮನೆಯಾದ ಮಡ್ತಿಲ ಎಂಬಲ್ಲಿ ಕುಟುಂಬದ ದೈವಾರಾಧನೆ ಸಮಯ ದೈವದ ವೇಷಧಾರಿಯಾದ ಮೋಹನ ಎಂಬವರಿಗೆ ಸಚಿನ್ ಮಡ್ತಿಲ ಎಂಬವರು ಹಣದ ಆಮಿಷವೊಡ್ಡಿ ಅವರ ಮುಖಾಂತರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ, ನಾವು ಜಾಗದ ಕೇಸನ್ನು ಹಿಂತೆಗೆಯಬೇಕೆಂಬ ಉದ್ದೇಶದಿಂದ ಬೆದರಿಕೆ ಹಾಕಿಸಿರುತ್ತಾರೆ. ಆದುದರಿಂದ ಬೆದರಿಕೆ ಹಾಕಲು ಪ್ರೇರೇಪಿಸಿದ ಸಚಿನ್ ಮಡ್ತಿಲ ಮತ್ತು ಬೆದರಿಕೆ ಹಾಕಿದ ಮೋಹನ್ ಎಂಬವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ನಂಬಿಕೆಗಳ ತವರೂರು. ನೇಮೋತ್ಸವ, ಹರಕೆ ಕಾರ್ಯಕ್ರಮಗಳಲ್ಲೂ ದೈವದ ವೇಷ ತೊಡುವವರನ್ನು ಬುಕ್ ಮಾಡಿಕೊಂಡು ತಮಗೆ ಬೇಕಾದಂತೆ ಬಳಸಿಕೊಳ್ಳುವ ವಿಚಿತ್ರ ಖಯಾಲಿಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಡ್ತಿಲಮನೆ ಕುಟುಂಬದ ಜಾಗದ ತಕರಾರು ಸಿವಿಲ್ ಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಕುಟುಂಬದ ಮನೆಯಲ್ಲಿ ಜರುಗಿದ ದೈವ ನೇಮೋತ್ಸವ ಸಂದರ್ಭದಲ್ಲಿ ದೈವದ ವೇಷಧಾರಿಗೆ ಹಣದ ಆಮಿಷವೊಡ್ಡಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ‘ನಿನಗೆ ಮಗು ಬೇಕಾ.? ಜಾಗ ಬೇಕಾ.? ಎಂದು ಈಗಲೇ ಹೇಳು..? ಎಂದು ಹೇಳುತ್ತಾ ಜಾಗಕ್ಕೆ ಸಂಬಂಧಿಸಿ ಹೂಡಿರುವ ಕೇಸನ್ನು ವಾಪಾಸು ತೆಗೆಯುವಂತೆ ಬೆದರಿಕೆ ಹಾಕಿರುವುದಾಗಿ ಭಾಸ್ಕರ ಮಡ್ತಿಲ ಪತ್ನಿ ಮಮತಾ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು.

ದೈವದ ಮುಖಾಂತರ ಇಂತಹ ಹೇಳಿಕೆ ನೀಡಿರುವುದರಿಂದ ನನ್ನ ಮಗುವಿಗೆ ಏನಾದರೂ ತೊಂದರೆ ಆಗಬಹುದಾ ಅನ್ನುವ ಆತಂಕಕ್ಕೆ ಮಮತ ಸಿಲುಕಿದ್ದರು. ಜನರ ಭಾವನೆಯ ನಂಬಿಕೆಗೆ ದ್ರೋಹ ಮಾಡಿ ದೈವದ ಹೆಸರಿನಲ್ಲಿ ಬೆದರಿಕೆ ಒಡ್ಡಿದವರ ಮೇಲೆ ಹಾಗೂ ಬೆದರಿಕೆ ಒಡ್ಡಲು ಪ್ರೇರೇಪಣೆ ನೀಡಿದವರ ಮೇಲೆ ಕಾನೂನು ರೀತಿಯ ಕ್ರಮದ ನ್ಯಾಯಕ್ಕಾಗಿ ಮಮತ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.