
ಕೊಚ್ಚಿ: ಪ್ರಯಾಗ್‌ರಾಜ್ ಕುಂಭಮೇಳದ ವೇಳೆ ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ, ಚಿತ್ರರಂಗದ ಅನಾಮಧೇಯ ನಿರ್ದೇಶಕರೊಬ್ಬರ ವಿರುದ್ಧ ಗಂಭೀರ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ತಮ್ಮ ಪತಿ ಫರ್ಮಾನ್ ಜೊತೆ ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ರಕ್ಷಣೆಗೆ ಮೊರೆ ಹೋಗಿದ್ದಾರೆ.
“ಸಿನಿಮಾದಲ್ಲಿ ಪಾತ್ರ ನೀಡುವುದಾಗಿ ನಂಬಿಸಿ ನಿರ್ದೇಶಕರೊಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವರ ಹೆಸರನ್ನು ಹೇಳಲು ನನಗೆ ನಾಚಿಕೆಯಾಗುತ್ತದೆ. ಅಂತಹ ಅಸಹ್ಯಕರ ವ್ಯಕ್ತಿಯ ಸಿನಿಮಾದಲ್ಲಿ ನಾನು ನಟಿಸುವುದಿಲ್ಲ,” ಎಂದು ಮೊನಾಲಿಸಾ ಕಿಡಿ ಕಾರಿದ್ದಾರೆ. ಅಲ್ಲದೆ, ತಮ್ಮ ಪೋಸ್ಟರ್‌ಗಳನ್ನು ಸುಡಲಾಗುತ್ತಿದೆ ಮತ್ತು ತಮಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಸನೋಜ್ ಮಿಶ್ರಾ ಒಬ್ಬ ಒಳ್ಳೆಯ ಮನುಷ್ಯನಲ್ಲ. ಚಿತ್ರೀಕರಣದ ವೇಳೆ ಆತ ಹತ್ತು ಬಾರಿ ನನ್ನ ಖಾಸಗಿ ಅಂಗ ಸ್ಪರ್ಶಿಸಿದ್ದಾನೆ.ಈ ಬಗ್ಗೆ ನಾನು ನನ್ನ ಕುಟುಂಬದವರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ, ಅವರು ಇದಕ್ಕೆ,ಇದು ನಿನ್ನ ಮೊದಲ ಸಿನಿಮಾ ಸುಮ್ಮನಿರು ಎಂದು ಹೇಳಿದ್ದರು.ಮೊದಲ ಸಿನಿಮಾ ಎಂಬ ಕಾರಣಕ್ಕೆ ನಾನು ಅತ್ಯಾಚಾರಕ್ಕೆ ಒಳಗಾಗಬೇಕೇ? ಎಂದು ಮೊನಾಲಿಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಲವ್ ಜಿಹಾದ್’ ವಿವಾದ: ತಮ್ಮ ವಿವಾಹದ ಕುರಿತು ಸ್ಪಷ್ಟನೆ ನೀಡಿದ ಮೊನಾಲಿಸಾ, “ನಾವು ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ಆದರೆ ಕೆಲವರು ಇದನ್ನು ‘ಲವ್ ಜಿಹಾದ್’ ಎಂದು ಕರೆದು ಸಮಾಜದಲ್ಲಿ ವಿಷ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ನನ್ನ ಪತಿಯಿಂದ ನನ್ನನ್ನು ಬೇರ್ಪಡಿಸಲು ಪ್ರಯತ್ನಿಸಿದರೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ,” ಎಂದು ಎಚ್ಚರಿಸಿದ್ದಾರೆ. ಮೊನಾಲಿಸಾ ಪೋಷಕರ ವಿರೋಧದ ನಡುವೆಯೂ ಕೇರಳದಲ್ಲಿ ಫರ್ಮಾನ್ ಅವರನ್ನು ವಿವಾಹವಾಗಿದ್ದರು.
