March 24, 2026
WhatsApp Image 2026-03-24 at 9.25.53 AM

ಪಡುಬಿದ್ರಿ: ನಕಲಿ ಚಿನ್ನದ ಸರ ನೀಡಿ ಮಹಿಳೆಯನ್ನು ವಂಚಿಸಿದ ಪ್ರಕರಣದಲ್ಲಿ ಆರೋಪಿತ ಮಹಿಳೆಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಜನವರಿ 13, 2026ರಂದು ಮಧ್ಯಾಹ್ನ ಸುಮಾರು 2:30ರ ವೇಳೆ ಕಾಪು ತಾಲೂಕಿನ ನಡ್ಸಾಲು ಗ್ರಾಮದ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ಮಹಿಳೆ ಮತ್ತು ವ್ಯಕ್ತಿಯೊಬ್ಬರು ಚಿನ್ನದಂತೆ ಕಾಣುವ 9 ಲಕ್ಷ್ಮಿ ಪೆಂಡೆಂಟ್ ಹೊಂದಿದ ನಕಲಿ ಸರವನ್ನು ತೋರಿಸಿ, ಅದರಲ್ಲಿ 6 ಪವನು ಚಿನ್ನವಿದೆ ಎಂದು ನಂಬಿಸಿ, ತುರ್ತು ಹಣದ ಅವಶ್ಯಕತೆ ಇದೆ ಎಂದು ಹೇಳಿ ಬಸ್ಸಮ್ಮರನ್ನು ಮೋಸಗೊಳಿಸಿದ್ದರು.

ಈ ವೇಳೆ ಬಸ್ಸಮ್ಮರ ಬಳಿಯಿದ್ದ ಸುಮಾರು 2 ಪವನು ತೂಕದ (ಸುಮಾರು ₹1.50 ಲಕ್ಷ ಮೌಲ್ಯದ) ಬಂಗಾರದ ಆಭರಣಗಳು ಹಾಗೂ ₹6,000 ನಗದನ್ನು ಪಡೆದು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಬಸ್ಸಮ್ಮ ಅವರು ಪಡೆದ ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ತೆರಳಿದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿದೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯಕ್, ಕಾರ್ಕಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಯಿತು.

ತನಿಖೆ ವೇಳೆ ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ ಹಾಗೂ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್ ಆರೋಪಿಗಳೆಂದು ಪತ್ತೆಯಾಯಿತು. ಮಾರ್ಚ್ 23, 2026ರಂದು ಆರೋಪಿತ ಕಾವ್ಯಳನ್ನು ಬಂಧಿಸಿ, ಅವಳಿಂದ ₹75,000 ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ ₹6,000 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಸಕ್ತಿವೇಲು ಇ., ಅನಿಲ್ ಕುಮಾರ್ ಟಿ ನಾಯಕ್ ಸೇರಿದಂತೆ ಎಎಸ್ಐ ರಾಜೇಶ್ ಪಿ., ಗಿರೀಶ್ ಯು.ಆರ್., ಹೆಚ್ಸಿ ಕೃಷ್ಣಪ್ರಸಾದ್, ಪಿಸಿ ಸಂದೇಶ್ ಭಂಡಾರಿ, ಮಹಿಳಾ ಪಿಸಿ ರುಕ್ಮಿಣಿ ಹಾಗೂ ಶಿರ್ವ ಮಹಿಳಾ ಪಿಸಿ ಜ್ಯೋತಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.