
ಬೆಳ್ತಂಗಡಿ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಬಂದಿದ್ದ ಮುಸ್ಲಿಂ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿ, ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಜರಂಗದಳದ ಕಾರ್ಯಕರ್ತರೆನ್ನಲಾದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 11ರಂದು ಉಜಿರೆ ದೇವಸ್ಥಾನದ ರಥಬೀದಿಯಲ್ಲಿ ಜಾಯಿಂಟ್ ವೀಲ್ ನೋಡಲು 17 ವರ್ಷದ ಮುಸ್ಲಿಂ ಬಾಲಕ ತನ್ನ ಶಾಲಾ ಸ್ನೇಹಿತರೊಂದಿಗೆ ಆಗಮಿಸಿದ್ದನು. ಈ ವೇಳೆ ಬಾಲಕನು ಹಿಂದೂ ಹುಡುಗಿಯರೊಂದಿಗೆ ಜಾತ್ರೆಗೆ ಬಂದಿದ್ದಾನೆ ಎಂದು ಆಕ್ಷೇಪಿಸಿದ ಕಿಡಿಗೇಡಿಗಳ ಗುಂಪು, ಆತನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದೆ.
ಆರೋಪಿಗಳಾದ ಗೌರವ್ ಶೆಟ್ಟಿ, ರಮೇಶ್ ಮತ್ತು ಇತರರು ಬಾಲಕನನ್ನು ಬಲವಂತವಾಗಿ ಬೈಕ್‌ನಲ್ಲಿ ಅಪರಿಚಿತ ಸ್ಥಳಕ್ಕೆ ಅಪಹರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಲ್ಲಿ ಬಾಲಕನಿಗೆ ತೀವ್ರವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ, “ನಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿದ್ದೇನೆ” ಎಂದು ಬಲವಂತವಾಗಿ ವೀಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯಿಂದ ತೀವ್ರ ಭಯಭೀತಗೊಂಡಿದ್ದ ಬಾಲಕನು ಕೆಲವು ದಿನಗಳ ಕಾಲ ಮೌನವಾಗಿದ್ದನು. ನಂತರ ಪೋಷಕರಿಗೆ ವಿಷಯ ತಿಳಿಸಿದ್ದು, ಮಾರ್ಚ್ 18ರಂದು ಬಾಲಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಹಲ್ಲೆ, ಅಪಹರಣ ಮತ್ತು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಕುರಿತು ಉಲ್ಲೇಖಿಸಲಾಗಿದೆ.
ಬೆಳ್ತಂಗಡಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳು ಸೇರಿದಂತೆ 137(2) (ಅಪಹರಣ), 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 351(2) (ಕ್ರಿಮಿನಲ್ ಬೆದರಿಕೆ), 352, 353(2) ಹಾಗೂ 190 (ಗುಂಪು ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
