
ಉಡುಪಿ: ಆದಾಯಕ್ಕೆ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಟಿ.ಎಂ. ಅವರ ಮನೆ ಹಾಗೂ ಸಂಬAಧಿತ ಸ್ಥಳಗಳ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಉಡುಪಿ ಪೊಲೀಸ್ ಠಾಣೆಯಲ್ಲಿ ಸರಕಾರಿ ಅಧಿಕಾರಿಯು ತಮ್ಮ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಂತೆ ಲೋಕಾಯುಕ್ತ ಪೊಲೀಸರು, ಮಾ.11ರಂದು ಆರೋಪಿ ಅಧಿಕಾರಿಗೆ ಸಂಬAಧಿಸಿದ ಮನೆ, ಕಛೇರಿ ಹಾಗೂ ಸಂಬAಧಿಕರ ಮನೆಗಳು ಸೇರಿದಂತೆ ಒಟ್ಟು 15 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧನಾ ಕಾರ್ಯ ನಡೆಸಿದ್ದರು.
ಶೋಧ ಕಾರ್ಯ ನಡೆಸಿದ ಸಂದರ್ಭದಲ್ಲಿ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಒಟ್ಟು 11 ನಿವೇಶನಗಳು, 6 ವಾಸದ ಮನೆಗಳು, 31 ಎಕರೆ ಕೃಷಿ ಜಮೀನು ಸೇರಿ ಒಟ್ಟು 6,90,64,716 ರೂ. ಮೌಲ್ಯದ ಸ್ಥಿರ ಆಸ್ತಿ, 3,95,941 ರೂ. ನಗದು, 1,47,50,506 ರೂ. ಮೌಲ್ಯದ ಚಿನ್ನಾಭರಣಗಳು, 17,00,000 ರೂ. ಮೌಲ್ಯದ ವಾಹನಗಳು, 25,75,000 ರೂ. ಬ್ಯಾಂಕ್ ಠೇವಣಿ, 72,68,554 ರೂ. ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು 2,66,90,001 ರೂ. ಚರ ಆಸ್ತಿ ಕಂಡುಬಂದಿದೆ.
ಒಟ್ಟು 8,69,23,435 ರೂ. ಮೌಲ್ಯದ ಅಸಮತೋಲನ ಆಸ್ತಿ ಕಂಡುಬಂದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
