
ಉಡುಪಿ: ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು ಚಾಲಕನೊಬ್ಬ ಸ್ಕೂಟಿ ಸವಾರನಿಗೆ ಹಲ್ಲೆ ನಡೆಸಿದ್ದಲ್ಲದೆ, ಸವಾರನ ಪತ್ನಿಯ ಮೇಲೂ ಹಲ್ಲೆ ನಡೆಸಿದ ಘಟನೆ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ವೇಗವಾಗಿ ಬಂದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಸ್ಕೂಟಿ ಸವಾರ ಹಾಗೂ ಅತನ ಪತ್ನಿ ಕೆಳಗಡೆ ಬಿದ್ದಿದ್ದರು. ಈ ಸಂಧರ್ಭದಲ್ಲಿ ಅಪಘಾತದಲ್ಲಿರುವವರಿಗೆ ಸಹಾಯ ಮಾಡುವ ಬದಲು ಏಕಾಏಕಿ ನುಗ್ಗಿ ಬಂದು ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿಗೆ ಕಾರು ಚಾಲಕ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ಕೂಟಿ ಸವಾರನ ಪತ್ನಿ ಘಟನೆಯ ವಿಡಿಯೋ ಮಾಡಲು ಮುಂದಾದಾಗ ಮಹಿಳೆಯ ಮೇಲೂ ಹಲ್ಲೆ ನಡೆಸಿ ಕಾರು ಹತ್ತಿ ಪರಾರಿಯಾಗಲು ಯತ್ನಿಸಿದ್ದಾನೆ.
ಅಪಘಾತಕ್ಕೀಡಾದ ಮಹಿಳೆ ಕಾರಿಗೆ ಅಡ್ಡ ನಿಂತು ಪ್ರತಿರೋಧ ವ್ಯಕ್ತಪಡಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಅಗಮಿಸಿದ ನಗರ ಪೊಲೀಸ್ ಠಾಣಾ ಅಧಿಕಾರಿಗಳು ಕಾರು ಚಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕಾರು ಚಾಲಕನ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದು, ಆತನ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
