
ಅಪ್ರಾಪ್ತ ವಯಸ್ಕನಿಗೆ ಸ್ಕೂಟರ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಾಹನದ ಮಾಲಕಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪರ್ಕಳ ಜಂಕ್ಷನ್ ಬಳಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಹೆರ್ಗಾ ಕಡೆಯಿಂದ ಪರ್ಕಳದತ್ತ ಅಡ್ಡಾದಿಡ್ಡಿಯಾಗಿ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ಶ್ರೇಯಸ್ (16) ಎಂಬಾತನನ್ನು ತಡೆದು ಪರಿಶೀಲನೆ ನಡೆಸಲಾಯಿತು.
ಈ ವೇಳೆ ಆತ ಅಪ್ರಾಪ್ತ ವಯಸ್ಕನಾಗಿದ್ದು, ಚಾಲನಾ ಪರವಾನಿಗೆಯೂ ಹೊಂದಿರದಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ ಸ್ಕೂಟರ್‌ನ್ನು ಉಷಾ (45) ಎಂಬವರು ಬಳಸಲು ನೀಡಿರುವುದು ತಿಳಿದುಬಂದಿದ್ದು, ಅಪ್ರಾಪ್ತನಿಗೆ ವಾಹನ ಸವಾರಿ ಮಾಡಲು ಅವಕಾಶ ಕಲ್ಪಿಸಿದ ಆರೋಪದಡಿ ಸ್ಕೂಟರ್ ಮಾಲಕಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವುದು ಕಾನೂನುಬಾಹಿರವಾಗಿದ್ದು, ಇದು ರಸ್ತೆ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ಪೋಷಕರು ಹಾಗೂ ವಾಹನ ಮಾಲಕರು ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
