
ಉಡುಪಿ: ಇಲ್ಲಿನ ಬೋರ್ಡಿಂಗ್ ಹಾಸ್ಟೆಲ್‌ನಿಂದ ಕಾಣೆಯಾಗಿದ್ದ 13 ವರ್ಷದ ಬಾಲಕನನ್ನು ಮಂಗಳೂರು ವಿಭಾಗದ ಮುಖ್ಯ ಟಿಟಿಇ (ಹೆಡ್ ಟಿಟಿಇ) ರಾಘವೇಂದ್ರ ಶೆಟ್ಟಿ ಅವರು ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಕೋಚ್ S3 ನಲ್ಲಿ ಬಾಲಕ ಒಬ್ಬನೇ ಪ್ರಯಾಣಿಸುತ್ತಿದ್ದಾಗ, ಟಿಕೆಟ್ ತಪಾಸಣೆ ವೇಳೆ ರಾಘವೇಂದ್ರ ಶೆಟ್ಟಿ ಅವರಿಗೆ ಬಾಲಕನ ಪ್ರತಿಕ್ರಿಯೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಆತನ ಬ್ಯಾಗ್ ಪರಿಶೀಲಿಸಿದಾಗ, ಶಾಲೆಯ ಐಡಿ ಕಾರ್ಡ್ ದೊರೆತಿದೆ. ತಕ್ಷಣವೇ ಅವರು ಶಾಲಾ ಅಧಿಕಾರಿಗಳನ್ನು ಸಂಪರ್ಕಿಸಿದರು. ಆಗ, ಬಾಲಕ ಹಾಸ್ಟೆಲ್‌ನಿಂದ ಓಡಿಹೋಗಿರುವುದು ದೃಢಪಟ್ಟಿದೆ. ಆತನ ತಾಯಿಗೆ ಮಗ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಲಾಯಿತು. ಆತ ತಾಯಿಯೊಂದಿಗೆ ವಾಸಿಸುತ್ತಿದ್ದು, ಆಕೆ ಮನೆಗೆಲಸ ಮಾಡಿ ಮಗನನ್ನು ಓದಿಸುತ್ತಿದ್ದರು.
ಉಡುಪಿ ನಿಲ್ದಾಣದಲ್ಲಿ ಬಾಲಕನನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್)ಗೆ ಹಸ್ತಾಂತರಿಸಲಾಯಿತು. ಪೊಲೀಸರು ಬಾಲಕ ಸುರಕ್ಷಿತವಾಗಿ ಮನೆ ಸೇರುವ ವರೆಗೆ ಆತನನ್ನು ಉಡುಪಿಯ ಮಕ್ಕಳ ಪಾಲನಾ ಕೇಂದ್ರದಲ್ಲಿ ಇರಿಸಿದರು.
ರಾಘವೇಂದ್ರ ಶೆಟ್ಟಿ ಅವರ ಕ್ಷಿಪ್ರ ಮತ್ತು ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಿ, ಕೊಂಕಣ ರೈಲ್ವೆಯ ಸಿಡಿಎಂ ಸಂತೋಷ್ ಕುಮಾರ್ ಝಾ ಅವರು 5,000 ರೂ. ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
