
ಭಟ್ಕಳ: ಮುಂಬೈಯಿಂದ ಭಟ್ಕಳಕ್ಕೆ ಆಗಮಿಸಿದ ಖಾಸಗಿ ಬಸ್ಸಿನಲ್ಲಿ ಭಾರೀ ಪ್ರಮಾಣದ ನಗದು ಹಾಗೂ ಚಿನ್ನ ಪತ್ತೆಯಾಗಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪಾರ್ಸೆಲ್ ರೂಪದಲ್ಲಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಹಾಗೂ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾಗಿ ವರದಿಯಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪಾರ್ಸೆಲ್ ರೂಪದಲ್ಲಿ ಕಳುಹಿಸಲಾದ ನೀಲಿ ಬಣ್ಣದ ಬ್ಯಾಗ್‌ವೊಂದನ್ನು ಪರಿಶೀಲಿಸಲಾಯಿತು. ಈ ಬ್ಯಾಗ್‌ನ್ನು ‘ಇರ್ಫಾನ್’ ಎಂಬ ಹೆಸರಿನಡಿ ಕಳುಹಿಸಲಾಗಿತ್ತು. ಬ್ಯಾಗಿನೊಳಗೆ ಸುಮಾರು ₹50 ಲಕ್ಷ ನಗದು ಮತ್ತು 401 ಗ್ರಾಂ ಚಿನ್ನದ ಬಳೆಗಳು ಸಿಕ್ಕಿವೆ.
ದಾಖಲೆಗಳಿಲ್ಲದೆ ಈ ವಸ್ತುಗಳನ್ನು ಸಾಗಿಸುತ್ತಿದ್ದ ಕಾರಣ, ಪೊಲೀಸರು ಹಣ ಮತ್ತು ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಪಿಐ ದಿವಾಕರ ಹಾಗೂ ಪಿಎಸ್‌ಐ ನವೀನ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
“ಹಣ ಮತ್ತು ಚಿನ್ನದ ನಿಜವಾದ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಹಾಜರಾದರೆ, ವಶಪಡಿಸಿಕೊಂಡ ವಸ್ತುಗಳನ್ನು ವಾಪಸು ಪಡೆಯಲು ಅವಕಾಶವಿದೆ ” ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಹಣ ಮತ್ತು ಚಿನ್ನದ ವಾರಸುದಾರರ ಪತ್ತೆಗಾಗಿ ತನಿಖೆ ಮುಂದುವರಿದಿದೆ.
