
ಬೆಂಗಳೂರು: ‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮುಗಲಭೆ ಸೃಷ್ಟಿಸಲು ವಿದೇಶಿ ದೇಣಿಗೆ ಬಳಕೆಯಾಗಿದೆಯೇ ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಾಥಮಿಕ ತನಿಖೆ ನಡೆಸುತ್ತಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಧರ್ಮಸ್ಥಳ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವವರೆಲ್ಲರ ಹಣಕಾಸು ವ್ಯವಹಾರಗಳ ಬಗ್ಗೆ ಇ.ಡಿ ಮಾಹಿತಿ ಕಲೆಹಾಕುತ್ತಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳ ಬ್ಯಾಂಕ್ ವಹಿವಾಟು ವಿವರಗಳನ್ನು ಪರಿಶೀಲಿಸುತ್ತಿದೆ. ವಿದೇಶಿ ದೇಣಿಗೆ ಪಡೆಯುವಲ್ಲಿ ಮತ್ತು ಅದರ ಬಳಕೆಯಲ್ಲಿ ಅಕ್ರಮಗಳಾಗಿದ್ದರೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ತನಿಖೆ ನಡೆಸಲಾಗುವುದು ಎಂದೂ ಮೂಲಗಳು ಮಾಹಿತಿ ನೀಡಿವೆ’ ಎಂದು ಪಿಟಿಐ ವಿವರಿಸಿದೆ.
ಧರ್ಮಸ್ಥಳ ಪ್ರಕರಣದಲ್ಲಿ ವಿದೇಶಿ ದೇಣಿಗೆ ಆರೋಪದ ತನಿಖೆಯನ್ನು ಇ.ಡಿ ಬೆಂಗಳೂರು ವಲಯ ಕಚೇರಿ ಖಚಿತಪಡಿಸಿಲ್ಲ.
ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯಬೇಕು ಎಂಬ ಉದ್ದೇಶದಿಂದ ಯೂಟ್ಯೂಬರ್‌ಗಳಿಗೆ ವಿದೇಶಿ ಹಣ ಬಂದಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸಲು ಇ.ಡಿಗೆ ನಿರ್ದೇಶಿಸಿ’ ಎಂದು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.
ಧರ್ಮಸ್ಥಳದ ವಿರುದ್ಧ ಹೋರಾಟ ನಡೆಸುತ್ತಿರುವವರಿಗೆ ವಿದೇಶಗಳಿಂದ ದೇಣಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ಬಜರಂಗದಳದ ಕಾರ್ಯಕರ್ತರೊಬ್ಬರು ಇ.ಡಿಗೆ ದೂರು ನೀಡಿದ್ದರು.
‘ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ವಿದೇಶಿ ದೇಣಿಗೆ ಬಳಕೆಯಾಗಿದೆ. ಸ್ಫೋಟದ ಸಂಚುಕೋರ ಧರ್ಮಸ್ಥಳ ಮಂಜುನಾಥ ದೇವಾಲಯ ಸ್ಪೋಟಿಸಲು ಯೋಜಿಸಿದ್ದ’ ಎಂದು ಇ.ಡಿ ಈಚೆಗೆ ಹೇಳಿತ್ತು. ಈ ಪ್ರಕರಣದ ಸಂಚುಕೋರರನ್ನು ಇ.ಡಿ ಈಚೆಗೆ ವಿಚಾರಣೆಗೆ ಒಳಪಡಿಸಿತ್ತು. ಇ.ಡಿಯ ಒಂದು ತಂಡವು ದಕ್ಷಿಣ ಕನ್ನಡ ಜಿಲ್ಲೆಗೂ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು.
