December 5, 2025
l80520240621123832

ಮಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಮನೆಗಳಲ್ಲಿ ಆಶ್ರಯ ನೀಡಿ, ರಕ್ಷಣೆ ನೀಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಪೊಲೀಸ್‌ ಇಲಾಖೆ ಈಗ ವಸತಿ ಸಮುಚ್ಚಯಗಳ ಮೇಲೂ ನಿಗಾ ವಹಿಸಲು ಮುಂದಾಗಿದೆ.
ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಬಜಪೆ ಬಳಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಿದ್ದು, ಹತ್ಯೆಗೆ ಸಂಚು ರೂಪಿಸಿದ್ದರು.

ವಸತಿ ಸಮುಚ್ಚಯಗಳಲ್ಲಿ ಕುಳಿತು ಆಪರಾಧ ಕೃತ್ಯಗಳಿಗೆ ಸಂಚು ರೂಪಿಸಿರುವುದು ಈ ಹಿಂದೆಯೂ ವಿವಿಧ ಪ್ರಕರಣಗಳಲ್ಲಿ ವರದಿಯಾಗಿತ್ತು. ಹಾಗಾಗಿ ತಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅಪಾರ್ಟ್‌ಮೆಂಟ್‌ಗಳ ಆಡಳಿತ ಮಂಡಳಿಗಳಿಗೆ ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಸೂಚಿಸಿದ್ದಾರೆ.

ಕೆಲವು ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಅನಧಿಕೃತವಾಗಿ ಪೇಯಿಂಗ್‌ ಗೆಸ್ಟ್‌
ಗಳು ಕಾರ್ಯಾಚರಿಸುತ್ತಿವೆ. ಕೆಲವರು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿ, ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಬಾಡಿಗೆ ನೀಡುವುದಿದೆ. ಹಾಗಾಗಿ ಯಾರು ಬರುತ್ತಾರೆ-ಯಾರು ಹೋಗುತ್ತಾರೆ ಎಂದು ಗೊತ್ತಿರದು. ಕೆಲವೆಡೆ ಸಂದರ್ಶಕರ ವಿವರಗಳನ್ನೂ ಪಡೆಯುವುದಿಲ್ಲ. ಸೆಕ್ಯೂರಿಟಿ ಗಾರ್ಡ್‌ಗಳಾಗಿ ಹೊರ ಜಿಲ್ಲೆ, ರಾಜ್ಯಗಳ ಕಾರ್ಮಿಕರನ್ನು ನಿಯೋಜಿಸು ವುದರಿಂದ ಭದ್ರತೆಯೂ ಸವಾಲಾಗಿದೆ.

ಪೊಲೀಸ್‌ ಇಲಾಖೆಯ ನಿರ್ದೇಶನವೇನು?
ಸಂಪೂರ್ಣ ಮಾಹಿತಿ ಪಡೆಯದೆ ಸಂದರ್ಶಕರನ್ನು ಒಳಗೆ ಬಿಡುವಂತಿಲ್ಲ

ಸಂದರ್ಶಕ ವಿವರವನ್ನು ಪುಸ್ತಕದಲ್ಲಿ ದಾಖಲಿಸಬೇಕು.

ಭದ್ರತಾ ಸಿಬಂದಿಯೇ ಸಂದರ್ಶಕರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಸಂಖ್ಯೆಯನ್ನು ಖಚಿತ ಮಾಡಿಕೊಳ್ಳಬೇಕು.

24*7 ಸಿಸಿ ಕೆಮರಾ ಚಿತ್ರೀರಣ, ವೀಡಿಯೋ ದಾಖಲೆಗಳನ್ನು 30 ದಿನಗಳ ವರೆಗೆ ಸಂಗ್ರಹಿಸಿಟ್ಟುಕೊಳ್ಳುವುದು.

ಅತ್ತಾವರದ ಫ್ಲ್ಯಾಟ್‌ನಲ್ಲಿ ಭಯೋತ್ಪಾದಕರು ವಾಸವಾಗಿದ್ದರು!
ನಗರದ ಅತ್ತಾವರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ 2008 ರಲ್ಲಿ ಭಯೋತ್ಪಾದಕ ಯಾಸಿನ್‌ ಭಟ್ಕಳ್‌ ಮತ್ತು ಆತನ ಸಹಚರ ನೆಲೆಸಿದ್ದರು. ಫ್ಲ್ಯಾಟ್‌ನಲ್ಲಿ ಇದ್ದುಕೊಂಡೇ ಬಾಂಬ್‌ ತಯಾರಿಸಿದ್ದು, ದೇಶದ ವಿವಿಧೆಡೆ ನಡೆದ ಬಾಂಬ್‌ ಬ್ಲಾಸ್ಟ್‌ಗಳಿಗೆ ಸಂಚು ರೂಪಿಸಿದ್ದರು. 2013ರಲ್ಲಿ ಹೈದರಾಬಾದ್‌ನ ದಿಲ್‌ಸುಖ್‌ ನಗರದಲ್ಲಿ ಸ್ಫೋಟಗೊಂಡಿದ್ದ ಬಾಂಬ್‌ ಮಂಗಳೂರಿನಲ್ಲೇ ತಯಾರಾಗಿತ್ತು ಎಂದು ತನಿಖೆಯ ವೇಳೆ ಪತ್ತೆಯಾಗಿತ್ತು. ಈ ನ್ಪೋಟದ ಬಳಿಕ ಯಾಸಿನ್‌ ಸಹಚರ ಅಸಾದುಲ್ಲಾ ಯಾನೆ ಹಡ್ಡಿ ಮಂಗಳೂರಿನಲ್ಲಿ ವಾಸವಾಗಿದ್ದ. ಆದರೆ ಅಕ್ಕಪಕ್ಕದ ಮನೆಯವರಿಗಾಗಲೀ ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ನವರಿಗಾಗಲೀ ತಿಳಿದೇ ಇರಲಿಲ್ಲ.

About The Author

Leave a Reply

Your email address will not be published. Required fields are marked *

You cannot copy content of this page.