December 22, 2024
main-31-1504179112-1521615610

ಉಡುಪಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್ ಗಳನ್ನು ಹೊಂದಿ ಸರ್ಕಾರಕ್ಕೆ ವಂಚಿಸಿದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಪಲಿಮಾರು ಗ್ರಾಮದ ರಾಖಿ ವಿನ್‌ಸೆಂಟ್ ಡಿ ಸೋಜಾ ಎಂಬಾತನು ತನ್ನ ಅಣ್ಣನಾದ ಪಿಯೂಶ್ ಆಗಸ್ಟಿನ್ ಡಿಸೋಜರವರ ಹೆಸರನ್ನು ದುರ್ಬಳಕೆ ಮಾಡಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತನ್ನದೇ ಭಾವಚಿತ್ರ ಹಾಗೂ ಬೇರೆ ಬೇರೆ ಹೆಸರು ಮತ್ತು ವಿಳಾಸದ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ಸದ್ರಿ ಪಾಸ್‌ಪೋರ್ಟ್‌ಗಳನ್ನು ಹೊಂದಲು ಪಾವುಲ್ ಡಿಸೋಜಾ ಎಂಬಾತನು ನಕಲಿ ಪಾಸ್‌ಪೋರ್ಟ್‌ಗಳನ್ನು ಸೃಷ್ಟಿಸಲು ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಿರುತ್ತಾನೆ. ವಿಜಯ್‌ರಾವ್ ಮತ್ತು ಮಹೇಂದ್ರ ಬಾಬುರವರು ತಮ್ಮ ಏಜನ್ಸಿಯ ಮೂಲಕ ರಾಖಿ ವಿನ್‌ಸೆಂಟ್‌ ಡಿ ಸೋಜಾಗೆ ಬೇರೆ ಬೇರೆ ಕೇಂದ್ರಗಳಿಂದ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಳ್ಳಲು ಸಹಕರಿಸಿ ಸುಳ್ಳು ಸ್ಪಷ್ಟನೆಯ ಪಾಸ್‌ಪೋರ್ಟ್‌ಗಳನ್ನು ನೈಜ್ಯವೆಂದು ನಂಬಿಸಿ ಸರಕಾರಕ್ಕೆ ವಂಚಿಸಿ ಇಸ್ರೇಲ್ ದೇಶದಲ್ಲಿ ಉದ್ಯೋಗ ಪಡೆದುಕೊಂಡು ಉದ್ಯೋಗ ಮಾಡುತ್ತಿರುವ ಬಗ್ಗೆ ಮತ್ತು ರಜೆಯಲ್ಲಿ ದೇಶಕ್ಕೆ ವಾಪಾಸು ಬಂದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇಲೆ ಕರಾವಳಿ ಕಾವಲು ಪಡೆಯ ಪೊಲೀಸರು 2008 ಜನವರಿ 5 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಉಡುಪಿ ತಾಲೂಕು ಕಾಪು ಗ್ರಾಮದ ಲೈಟ್‌ಹೌಸ್ ಬೀಚಿನ ಬಳಿ ರಾಖಿ ವಿನ್‌ಸೆಂಟ್ ಡಿ ಸೋಜಾ ಎಂಬಾತನನ್ನು ಪಾಸ್ ಪೋರ್ಟ್‌ಗಳ ಸಮೇತ ವಶಕ್ಕೆ ಪಡೆದು ದಸ್ತಗಿರಿ ಮಾಡಿರುತ್ತಾರೆ.

ಆರೋಪಿತರೆಲ್ಲರೂ ಸೇರಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿ ದ್ರೋಹ ಎಸಗಿರುವ ಹಿನ್ನೆಲೆ, ಪಾಸ್‌ಪೋರ್ಟ್ ಕಾಯ್ದೆಯಡಿ ಉಡುಪಿ ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಸಿ.ಜೆ.ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ದೀಪಾರವರು ರಾಖಿ ವಿನ್‌ಸೆಂಟ್ ಡಿ ಸೋಜಾಗೆ 3 ವರ್ಷ ಶಿಕ್ಷೆ ಹಾಗೂ 5,000 ರೂ. ದಂಡ, ವಿಜಯ್‌ರಾವ್ ಮತ್ತು ಮಹೇಂದ್ರ ಬಾಬುಗೆ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ಮತ್ತು ಎಲ್ಲಾ ಆರೋಪಿತರಿಗೆ ಪಾಸ್‌ಪೋರ್ಟ್‌ ಕಾಯ್ದೆಯಡಿಯಲ್ಲಿ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ,ಕೆ. ವಾದ ಮಂಡಿಸಿರುತ್ತಾರೆ.

About The Author

Leave a Reply

Your email address will not be published. Required fields are marked *

You cannot copy content of this page.