December 6, 2025
rty

ಪುತ್ತೂರು : ಮುಖ್ಯ ರಸ್ತೆಗೆ ಬದಿಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿದ್ದ ರಾಜೇಶ್ ಬನ್ನೂರು  ವಾಸಿಸುತ್ತಿದ್ದ  ಮನೆಯನ್ನು ಮಂಗಳವಾರ ತಡ ರಾತ್ರಿ ತೆರವುಗೊಳಿಸಿದ ವಿಚಾರವಾಗಿ ಬುಧವಾರ ಬೆಳಿಗ್ಗೆ ಪೊಲೀಸ್‍  ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ ಸುಮಾರು 2.30ರಿಂದ 3 ಗಂಟೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ದೂರಲಾಗಿದೆ. ಮಂಗಳೂರಿನ ಜಾತ್ರೆಗೆ ತೆರಳಿದ್ದ ವೇಳೆ ಹಿಂಭಾಗದಿಂದ ಜೆಸಿಬಿ ಮೂಲಕ ಮನೆಯನ್ನು ದೂಡಿ ಹಾಕಲಾಗಿದೆ. ಇದನ್ನು ಪ್ರಶ್ನಿಸಲು ಮುಂದಾದಾಗ ಮಾಸ್ಕ್ ಧರಿಸಿದ್ದ ಕೆಲವರು ತನ್ನನ್ನು ಹಿಡಿದುಕೊಂಡಾಗ ಕೈ ಮೇಲೆ ಪರಚಿದ ಗಾಯಗಳಾಗಿವೆ ಎಂದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ರಾಜೇಶ್  ಬನ್ನೂರು ದೂರು ನೀಡಿದರು.

ಸ್ಥಳದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದು, ಎಫ್.ಐ.ಆರ್. ದಾಖಲಿಸುವಂತೆ ಒತ್ತಾಯಿಸಿದರು. ಜಾಗ ಬಿಟ್ಟುಕೊಡಲು ನಮ್ಮದೇನು ತಕರಾರಿಲ್ಲ. ಆದರೆ ಒಂದು ಮಾತನ್ನು ಹೇಳದೇ, ಗೂಂಡಾಗಳ ರೀತಿ ಮನೆಯನ್ನು ದೂಡಿ ಹಾಕುವುದು ಎಂದರೆ ಏನರ್ಥ. ಗ್ಯಾಸ್ ಸಿಲಿಂಡರನ್ನು ತೋಡಿಗೆ ಎಸೆಯಲಾಗಿದೆ. ಮನೆ ಒಳಗಡೆಯಿದ್ದ ಕಪಾಟುಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಒಂದು ವೇಳೆ ಮನೆಯವರು ಒಳಗಡೆ ಇದ್ದಿದ್ದರೆ, ಅವರನ್ನು ಕೊಂದು ಹಾಕುತ್ತಿದ್ದರು. ಹಾಗಾಗಿ ಎಫ್.ಐ.ಆರ್. ದಾಖಲಿಸಲೇ ಬೇಕು ಎಂದು ಪಟ್ಟು ಹಿಡಿದರು.

ಈ ಸಂದರ್ಭ ಮಾತನಾಡಿದ ಪೊಲೀಸ್ ನಿರೀಕ್ಷಕರು, ತೆರವುಗೊಂಡಿರುವ ಜಾಗ ದೇವಸ್ಥಾನದ ಹೆಸರಿನಲ್ಲಿರುವುದರಿಂದ ದೇವಳದ ಆಡಳಿತಾಧಿಕಾರಿಯವರನ್ನು ಬರಲು ತಿಳಿಸಿದ್ದೇನೆ.  ಅವರು ಬಂದ ನಂತರ ಅವರಲ್ಲಿ ಮಾಹಿತಿ ಪಡೆದುಕೊಂಡು, ಮುಂದಿನ  ಕ್ರಮ ಕೈಗೊಳ್ಳುವುದಾಗಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಈ ಸಂದರ್ಭ ಆಕ್ರೋಶಿತರಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಮನೆ ತೆರವುಗೊಳಿಸುವ ವಿಚಾರ ಪೊಲೀಸರಿಗೆ ತಿಳಿಸಿಯೇ ಈ ರೀತಿಯ ಗೂಂಡಾ ವರ್ತನೆ ತೋರಿಸಿದ್ದಾರೆ. ಹಾಗಾಗಿ ಪೊಲೀಸರು ಪಕ್ಷಪಾತವಾಗಿ  ಮಾತನಾಡುತ್ತಿದ್ದಾರೆ ಎಂದರು.

ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ. ಪೊಲೀಸರು ನ್ಯಾಯಯುತವಾದ ಕ್ರಮವನ್ನೇ ಅನುಸರಿಸುತ್ತಾರೆ. ಎಫ್.ಐ.ಆರ್. ದಾಖಲಿಸುವ ಮೊದಲು ಒಂದಷ್ಟು ಪರಿಶೀಲನೆ ನಡೆಸುವುದು ಕರ್ತವ್ಯ ಮತ್ತು  ಅಗತ್ಯ ಎಂದು ತಿಳಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.