ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನ. 9 ರಂದು ನಡೆದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿಗೆ ಮೃತ ಬಿಜು ಮೋನ್ ಕುಟುಂಬ ದೂರು ನೀಡಿದೆ.
ಕೇರಳ ಮೂಲದ ಬಿಜು ಮೋನ್ ಸಾವಿನ ಬಗ್ಗೆ ಸಂಶಯ ಇದೆ ಎಂದು ಆತನ ಕುಟುಂಬ ಗಂಭೀರ ಆರೋಪ ಮಾಡಿದೆ. ಬೆಂಗಳೂರಿನ ಸಿಐಡಿ ಇನ್ಸ್‌ಪೆಕ್ಟರ್‌ಗೆ ಪತ್ರ ಬರೆದು ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಮೃತ ಕುಟುಂಬ ಮನವಿ ಮಾಡಿದೆ.
ನವೆಂಬರ್ 9 ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಕೇಸ್‌ನಲ್ಲಿ ಬಿಜು ಮೋನ್ ಸಾವನ್ನಪ್ಪಿದ್ದ. ಬಿಜು ಮೋನ್ ಮೈಮೇಲೆ ಕೆಲ ಗಾಯಗಳ ಗುರುತು, ಮೊಣಕಾಲಿನ ಕೆಳಗೆ ಕೆಲ ಗಾಯದ ಗುರುತು ಕಂಡುಬಂದಿತ್ತು. ಲಾಕಪ್ ಡೆತ್ ಪ್ರಕರಣದ ಬಗ್ಗೆ ಸಿಒಡಿ ತನಿಖೆ ನಡೆಯುತ್ತಿದ್ದು, ಆರೋಪಿ ಕುಸಿದು ಬಿದ್ದು ಸಾವನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಲಾಕಪ್ ಡೆತ್ ಎಂದು ಪ್ರಕರಣ ಬೆಳಕಿಗೆ ಬಂತು. ಲಾಕಪ್ ಡೆತ್ ಪ್ರಕರಣವನ್ನು ಅಸಹಜ ಸಾವು ಎಂದು ಪೊಲೀಸರು ಬಿಂಬಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸರ ವಿರುದ್ಧ ಬಿಜು ಮೋನು ಕುಟುಂಬ ಗಂಭೀರ ಆರೋಪ ಮಾಡಿದೆ. ಜೊತೆಗೆ ಕೇರಳ ಸಿಎಂಗೆ ಈ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.
ಮೃತ ಬಿಜು ಮೋನ್ ಸಹೋದರ ಬಿನು ಯೋಹನ್ನಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಮೃತದೇಹ ನೋಡದಂತೆ ಪೊಲೀಸರು ಶವಗಾರದಲ್ಲಿ ಲೈಟ್ ಆಫ್ ಮಾಡಿದ್ದರು. ಮೊಬೈಲ್ ಬೆಳಕಿನಲ್ಲಿ ನೋಡಿದಾಗ ಮೊಣಕಾಲಿನ ಕೆಳಗೆ ಬಹಳಷ್ಟು ಗಾಯದ ಗುರುತುಗಳಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ಮೇರೆಗೆ ಮೃತದೇಹ ಪರಿಶೀಲಿಸಲಾಗಿತ್ತು. ದೇಹದಲ್ಲಿ ಸಾಕಷ್ಟು ಗಾಯದ ಗುರುತುಗಳು ಕಂಡು ಬಂದಿದ್ದವು. ನನ್ನ ಸಹೋದರನನ್ನು ಪೊಲೀಸರು ಕಾನೂನು ಪ್ರಕಾರವಾಗಿ ವಶಕ್ಕೆ ಪಡೆದ ಬಗ್ಗೆ ಅನುಮಾನವಿದೆ. ಮಹಿಳೆಯೋರ್ವಳ ದೂರಿನ ಹಿನ್ನೆಲೆಯಲ್ಲಿ ನನ್ನ ಸಹೋದರನನ್ನು ಬಂಧಿಸಲಾಗಿದೆ ಎಂದಿದ್ದರು. ದೂರು ಕೊಟ್ಟ ಮಹಿಳೆ ಯಾರು? ಅವರು ಕೊಟ್ಟ ದೂರಿನ ಕಾಪಿ ಬಗ್ಗೆ ಮಾಹಿತಿ ನೀಡಿಲ್ಲ. ಇವೆಲ್ಲವನ್ನೂ ನಾವು ಕೇರಳ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಅಸಹಜ ಸಾವು ಎಂದು ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.
ಮುಂದುವರೆದು ಬ್ರಹ್ಮಾವರ ಪೊಲೀಸರ ಮೇಲೆ ತುಂಬಾ ಅನುಮಾನವಿದೆ. ಸಿಐಡಿ ಅಧಿಕಾರಿಗಳು ಹೇಳಿಕೆ ದಾಖಲಿಸಿದ್ದೇವೆ. ನಮಗೆ ತುಂಬಾ ಮಂದಿ ಕರೆ ಮಾಡಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆಯೂ ನಾವು ಸಿಐಡಿಗೆ ಮಾಹಿತಿ ನೀಡಿದ್ದೇವೆ. ನಮಗೆ ನ್ಯಾಯ ಬೇಕು, ಪೊಲೀಸರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.