ಹೆಬ್ರಿ: ಉಡುಪಿ ಹೆಬ್ರಿಯ ಪೀತ್ ಬೈಲ್ ಎಂಬಲ್ಲಿ ಸೋಮವಾರ ತಡರಾತ್ರಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ದಳ ಎನ್ಕೌಂಟರ್ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದಂಡೇ ಆಗಮಿಸಿದೆ.
ಆಂತರಿಕ ಭದ್ರತಾ ಡಿಜಿಪಿ ರೂಪಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳದ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ , ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಎಫ್ಎಸ್ಎಲ್ ತಂಡವನ್ನು ಕೂಡ ಕರೆಸಿಕೊಳ್ಳಲಾಗಿದೆ. ಬೆರಳಚ್ಚು ತಜ್ಞರು ಕೂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು. ಈ ಭಾಗದ ಪ್ರಭಾವಿ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ ಕೌಂಟರ್ ನಿಂದಾಗಿ ನಕ್ಸಲ್ ನಿಗ್ರಹ ಪಡೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಬಹುದೊಡ್ಡ ಗೆಲುವು ಸಿಕ್ಕಿದಂತಾಗಿದೆ.