ಮಂಗಳೂರು : ಮಂಗಳೂರಿನ ಪಕ್ಷಿಕೆರೆಯ ಜಲಜಾಕ್ಷಿ ಅಪಾರ್ಟ್ ಮೆಂಟ್‌ನಲ್ಲಿ ಪತ್ನಿ, ಮಗುವನ್ನು ಕೊಲೆ ಮಾಡಿ ಬಳಿಕ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಮೂಲ್ಕಿ ಪೊಲೀಸರು ಯುವಕನ ತಾಯಿ ಮತ್ತು ಸಹೋದರಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪಕ್ಷಿಕೆರೆ ಜಲಜಾಕ್ಷಿ ಫ್ಲ್ಯಾಟ್ ನಿವಾಸಿ ಕಾರ್ತಿಕ್ ಭಟ್ (32), ಆತನ ಪತ್ನಿ ಪ್ರಿಯಾಂಕಾ(28) ಮತ್ತು ಪುತ್ರ ಹೃದಯ್ (4) ಮೃತಪಟ್ಟವರು. ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪ್ರಿಯಾಂಕಾ ಮತ್ತು ಹೃದಯ್ ಕೊಲೆಯಾದ ಸ್ಥಿತಿಯಲ್ಲಿ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭ ಕಾರ್ತಿಕ್ ಭಟ್ ಡೆತನೋಟ್ ಕೂಡ ಬರೆದಿಟ್ಟಿದ್ದರು. ಮೃತ ಪ್ರಿಯಾಂಕಾ ಹೆತ್ತವರು ಶಿವಮೊಗ್ಗದಲ್ಲಿದ್ದು, ಘಟನಾ ಸ್ಥಳಕ್ಕೆ ಬಂದು, ಘಟನೆಗೆ ಕಾರ್ತಿಕ್ ಭಟ್ ಹೆತ್ತವರು ಮತ್ತು ಸಹೋದರಿ ಕಾರಣ ಎಂದು ಮಾಧ್ಯಮದೆದುರು ಅಲವತ್ತುಕೊಂಡಿದ್ದರು. ಬಳಿಕ ಮೂಲ್ಕಿ ಠಾಣೆಗೆ ದೂರನ್ನೂ ನೀಡಿದ್ದರು.
ಆದರೆ ಕಾರ್ತಿಕ್ ಭಟ್ ಕುಟುಂಬಿಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಪೊಲೀಸರು ಕಾರ್ತಿಕ್ ಭಟ್ ಕು ಟುಂಬಿಕರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಪ್ರಿಯಾಂಕಾ ಅವರ ತಾಯಿ ಸಾವಿತ್ರಿ ನೀಡಿದ ದೂರಿಗೆ ಸ್ಪಂದಿಸಿದ ಮೂಲ್ಕಿ ಠಾಣೆ ಪೊಲೀಸರು ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ (61) ಮತ್ತು ಸಹೋದರಿ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್ (36) ಅವರನ್ನು ಸೋಮವಾರ ಬಂಧಿಸಿ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರ ವಿರುದ್ಧ 308 ‘ಭಾರತೀಯ’ ನ್ಯಾಯಸಂಹಿತ ಪ್ರಕಾರ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ.