ಸುಳ್ಯ: ಅಂಗಡಿಯ ಹೊರಗೆ ಮಾರಾಟಕ್ಕಿರಿಸಿದ್ದ ಮಣ್ಣಿನ ಮಡಿಕೆಗಳನ್ನು ರಾತ್ರಿಯ ವೇಳೆ ಕಳವುಗೈದ ಘಟನೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ರಾತ್ರಿ ನಡೆದಿದೆ. ಕಲ್ಲುಗುಂಡಿ ಮೇಲಿನ ಪೇಟೆಯ ವಿಷ್ಣುಮೂರ್ತಿ ಗದ್ದೆಯ ಬಳಿಯಲ್ಲಿ ಯಶೋಧಾ ಬಂಗ್ಲೆಗುಡ್ಡೆ ಎಂಬವರು ತಮ್ಮ ಜೀವನೋಪಾಯಕ್ಕಾಗಿ ಕ್ಯಾಂಟೀನ್ ನಡೆಸುತ್ತಿದ್ದು, ಅಲ್ಲೇ ಮಣ್ಣಿನ ಮಡಿಕೆಗಳನು ಮಾರಾಟ ಮಾಡುತ್ತಿದ್ದರು. ಪ್ರತಿನಿತ್ಯ ರಾತ್ರಿ ಮಡಿಕೆಗಳನ್ನು ಟರ್ಪಲ್ ಮೂಲಕ ಮುಚ್ಚಿ ಇಡುತ್ತಿದ್ದರು. ಗುರುವಾರ ಬೆಳಗ್ಗೆ ಯಶೋಧಾ ಅವರು 25 ಸಾವಿರ ರೂ ಮೌಲ್ಯದ ನೂರು ಮಣ್ಣಿನ ಮಡಿಕೆಗಳನ್ನು ಖರೀದಿಸಿ, ಮಾರಾಟಕ್ಕೆ ಇರಿಸಿದ್ದರು. ಆದರೆ ರಾತ್ರಿ ವೇಳೆ ಅಂಗಡಿ ಹೊರಗೆ ಇರಿಸಿದ್ದ ಮಡಿಕೆಗಳನ್ನು ಕಳ್ಳರು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಯಶೋಧಾ ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.