ಕಾರ್ಕಳ: ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ನಾಯ್ಕ ಸೂಡ ಎಂಬಾತನನ್ನು ಪೊಲೀಸರು ಕಾರ್ಕಳದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಹಿಂದೂ ಜಾಗರಣ ವೇದಿಕೆಯ ಮುಖಂಡನಾದ ಉಮೇಶ ನಾಯ್ಕ ದಕ್ಷಿಣ ಕನ್ನಡ ಮರಾಠ ಸಂರಕ್ಷಣಾ ಸಮಿತಿಯ ವಾಟ್ಸ್‌ಅಪ್ ಗುಂಪಿನಲ್ಲಿ ಹಾಕಿದ ವಾಯ್ಸ್ ಮಸೇಜ್‌ನಲ್ಲಿ ಅಂಬೇಡ್ಕರ್ ಹಾಗೂ ದಲಿತರಿಗೆ ಅಪಮಾನಕರ ರೀತಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆದ ಬಳಿಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ನವೆಂಬರ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಕರಾವಳಿ ಮರಾಠಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೊ ಮುದ್ರಿಸಿರುವುದು ಉಮೇಶ ನಾಯ್ಕನ ಕಂಗೆಣ್ಣಿಗೆ ಗುರಿಯಾಗಿತ್ತು. ಇದನ್ನೇ ನೆಪವಾಗಿರಿಸಿಕೊಂಡು ಹಿಂದೂ ಜಾಗರಣ ವೇದಿಕೆಯ ಮುಖಂಡ ಅಂಬೇಡ್ಕರ್ ಹಾಗೂ ದಲಿತರನ್ನು ಅವಮಾನಿಸಿ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದ.