ಮಂಗಳೂರು: ಷೇರು ಟ್ರೇಡಿಂಗ್ ಹೆಸರಿನಲ್ಲಿ ಅಧಿಕ ಲಾಭ ಗಳಿಸಬಹುದು ಎಂದು ಆಸೆ ಹುಟ್ಟಿಸಿ ₹ 90.90 ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು ಇಲ್ಲಿನ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನನ್ನ ವಾಟ್ಸಾಪ್ ಖಾತೆಗೆ ಜುಲೈ 1ರಂದು ‘613 ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಅಫಿಷಿಯಲ್ ಸ್ಟಾಕ್’ ಹೆಸರಿನ ವಾಟ್ಸ್ ಆಯಪ್ ಗ್ರೂಪ್‌ನಿಂದ ಸಂದೇಶ ಬಂದಿತ್ತು.
ಅದರಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಆನ್ ಲೈನ್ ಮೂಲಕ ತರಬೇತಿ ನೀಡಿದ್ದರು. ಬಳಿಕ ಜುಲೈ 16ರಂದು ಟ್ರೇಡಿಂಗ್ ಖಾತೆ ತೆರೆಯಲು ಅಪರಿಚಿತ ವ್ಯಕ್ತಿ ಲಿಂಕ್ ಕಳುಹಿಸಿದ್ದ. ಅದರಲ್ಲಿ ವೈಯಕ್ತಿಕ ವಿವರಗಳನ್ನು ನಮೂದಿಸಿ ಖಾತೆ ತೆರೆದಿದ್ದೆ. ಮೊದಲಿಗೆ ₹ 5 ಸಾವಿರ ಹಣ ತೊಡಗಿಸಿದ್ದೆ. ನಂತರ ಜುಲೈ 22ರಿಂದ ಆ.16ರವರೆಗೆ ಅವರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹ 90.90 ಲಕ್ಷ ಪಾವತಿಸಿದ್ದೆ. ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಅವಕಾಶ ನೀಡದೇ ವಂಚಿಸಲಾಗಿದೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.