
ಮಲ್ಪೆ: ಗೋವಾದ ಕಡಲ ಗಡಿಗೆ ಅಕ್ರಮವಾಗಿ ನುಗ್ಗಿ ಬುಲ್ ಟ್ರಾಲಿಂಗ್ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಎರಡು ಮೀನುಗಾರಿಕಾ ಬೋಟ್ ಗಳನ್ನು ಗೋವಾ ರಾಜ್ಯ ಮೀನುಗಾರಿಕೆ ಇಲಾಖೆ ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಬೋಟ್ ಗಳಲ್ಲಿದ್ದ ಮೀನುಗಳನ್ನು ಹರಾಜು ಹಾಕಿ ಬೋಟ್ ಮಾಲೀಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮಲ್ಪೆಯಿಂದ ಮೀನುಗಾರಿಕಾ ಬೋಟ್ ಗಳು ಗೋವಾ ಕಡಲ ಗಡಿ ಪ್ರವೇಶಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿವೆ ಎಂದು ಸ್ಥಳೀಯ ಮೀನುಗಾರರು ದೂರು ನೀಡಿದ್ದರು. ಆ ಬೋಟ್ ನಲ್ಲಿದ್ದ ಮೀನುಗಾರರು ಸ್ಥಳೀಯರಿಗೆ ತೊಂದರೆ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಬಗ್ಗೆ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು.
