ತೆಲಂಗಾಣದ ಆಡಳಿತ ಪಕ್ಷದ (ಟಿಆರ್‌ಎಸ್) ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದ ವೈಎಸ್‌ಆರ್‌ಟಿಪಿ ಪಕ್ಷದ ನಾಯಕಿ ವೈ.ಎಸ್. ಶರ್ಮಿಳಾರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿಯ ತಂಗಿಯೂ ಹೌದು.
ಸೋಮಾಜಿಗುಡದ ಯಶೋದಾ ಆಸ್ಪತ್ರೆ ಬಳಿ ಇರುವ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನದ ಹತ್ತಿರ ಕಾರು ಚಲಾಯಿಸಿಕೊಂಡು ಬಂದ ಶರ್ಮಿಳಾರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಅಲ್ಲಿಂದ ತೆರಳಲು ಒಪ್ಪದ ಶರ್ಮಿಳಾರನ್ನು ಪೊಲೀಸರು ಕ್ರೇನ್ ಮೂಲಕ ಕಾರು ಸಮೇತವಾಗಿ ವಶಕ್ಕೆ ಪಡೆದ ವಿಡಿಯೋ ಭಾರಿ ವೈರಲ್ ಆಗಿದೆ. ಇದರಿಂದ ಸೊಮಾಜಿಗುಡ ವೃತಕ್ಕೆ ಸಂಪರ್ಕ ಕಲ್ಪಿಸುವ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾಗಿದೆ.
ಬಂಧನದ ಸಂದರ್ಭ ಮಾತನಾಡಿದ ವೈಟಿಆರ್ಎಸಸ ನಾಯಕಿ ಶರ್ಮಿಳಾ ‘ನನ್ನನ್ನು ಏಕೆ ಬಂಧಿಸುತ್ತೀರಿ? ನಾನು ಬಲಿಪಶು. ಆರೋಪಿಯಲ್ಲ… ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವರನ್ನು ಏಕೆ ತಡೆಯುತ್ತೀರಿ?’ ಎಂದು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವೈಎಸ್‌ಆರ್‌ಟಿಪಿ ನಾಯಕಿ ಶರ್ಮಿಳಾ, ಕೆಸಿಆರ್ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಇವರು ಹಮ್ಮಿಕೊಂಡಿದ್ದ ಪಾದಯಾತ್ರೆ ಈವರೆಗೆ ಸುಮಾರು 3,500 ಕಿ.ಮೀ ಕ್ರಮಿಸಿದೆ. ವಾರಂಗಲ್‌ನಲ್ಲಿ ಸೋಮವಾರ ವೈಎಸ್‌ಆರ್‌ಟಿಪಿ ಹಾಗೂ ಟಿಆರ್‌ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಈ ಸಂದರ್ಭ ಮಾತನಾಡಿದ್ದ ಮಾತನಾಡಿದ್ದ ಶರ್ಮಿಳಾ, ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿಯನ್ನು ಟೀಕಿಸಿದ್ದರು. ಶರ್ಮಿಳಾ ಮಾತುಗಳಿಂದ ಕೆರಳಿದ್ದ ಟಿಆರ್‌ಎಸ್ ಕಾರ್ಯಕರ್ತರು ಇಂದು ಅವರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.