ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ” ಸರಣಿ 55ರಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ವಿದುಷಿ ಕು| ವಸುಂಧರಾ ರವರು ತನ್ನ ನೃತ್ಯಾಭಿನಯನದ ಮೂಲಕ ಪೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.
ನಾಟ್ಯಾಧಿ ದೇವತೆಯಾದ ಶಿವನಿಗೆ ಹೂ, ಮೈ, ಮನಗಳನ್ನು ಅರ್ಪಿಸಿ ದೇವತೆಗಳಿಗೆ ಗುರುಗಳಿಗೆ ತಂದೆ-ತಾಯಿಯರಿಗೆ ನಮಸ್ಕರಿಸಿ ಬಂದಂತ ಎಲ್ಲಾ ಕಲಾಭಿಮಾನಿಗಳನ್ನು ಸ್ವಾಗತಿಸುವ ಪುಷ್ಪಾಂಜಲಿ ಮೂಲಕ ನೃತ್ಯ ಪ್ರಾರಂಭಿಸಿದರು.
ಪದವರ್ಣ ಪ್ರಸ್ತುತಿಯಲ್ಲಿ ವರ್ಣವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಇಲ್ಲಿ ರುಕ್ಮಿಣಿಯು ತನ್ನ ಬಾಲ್ಯದಿಂದ ಕೃಷ್ಣನ ಕಥೆ, ಮಹಿಮೆಗಳನ್ನು ಕೇಳುತ್ತಾ, ಅಪಾರವಾಗಿ ಪ್ರೀತಿಸ ತೊಡಗಿದಳು. ಆತನನ್ನೇ ತನ್ನ ಕಲ್ಪನೆ ಚಿತ್ರಿಸಿದಂತೆ ಪಟವೊಂದರಲ್ಲಿ ಚಿತ್ರಿಸಿ ಅದರೊಂದಿಗೆ ಮಾತನಾಡುವ ವೇಳೆ ಸಖಿಯು ಸತಾಯಿಸಿದಾಗ, ಅಣ್ಣ ರುಕ್ಮನು ಬಂದು ಆ ಚಿತ್ರಪಟವನ್ನು ಹರಿದು ಆಕೆಯನ್ನು ಕೋಣೆಯಲ್ಲಿರಿಸಿದನು.
ಅದೇ ವೇಳೆ ಅಲ್ಲಿಂದಲೇ ಹಾದು ಹೋಗುತ್ತಿದ್ದ ದೇವಾಲಯದ ಅರ್ಚಕರ ಬಳಿ ಬಾಗಿಲುಗಳ ತೆರೆಯಲು ಹೇಳಿ, ಅವರ ಬಳಿ ತನ್ನ ಸ್ವಯಂವರದ ಮೊದಲೇ ದೇವಿಯ ದೇವಸ್ಥಾನಕ್ಕೆ ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಪತ್ರವನ್ನು ಬರೆದು ಅದನ್ನು ಕೃಷ್ಣನಿಗೆ ತಲುಪಿಸಲು ಹೇಳುತ್ತಾಳೆ.
ಎಲ್ಲರ ಮನವ ಅರ್ಥೈಸಿಕೊಳ್ಳುವವನು ತನ್ನ ಮನವ ಏಕೆ ಅರ್ಥೈಸಿಕೊಳ್ಳುತ್ತಿಲ್ಲ ಇದು ನ್ಯಾಯವೇನು ಕೃಷ್ಣ.. ಎಂದು ಅಪಾರ ಪ್ರೇಮ ಕುತೂಹಲದಿಂದ, ಇತ್ತ ರುಕ್ಮಿಣಿಯು ತನ್ನ ಮನದೊಡೆಯನ ನೆನೆಯುತ್ತಿರಲು ಅತ್ತ ಮನದರಸಿಯ ಕರೆದೊಯ್ಯಲು ಕೃಷ್ಣ ಬರುವನೆ ಎಂಬ ನೃತ್ಯವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದರು.
ಪುರಂದರ ದಾಸರು ರಚಿಸಿರುವ ನಿಂದಾ ಸ್ತುತಿ “ಎಂಥ ಚೆಲುವೆಗೆ” ಈ ನೃತ್ಯವು ಶಿವ ಪಾರ್ವತಿಯರ ವಿವಾಹ ಮಹೋತ್ಸವಕ್ಕೆ ಬಂದಂತಹ ಸಖಿಯರೀರ್ವರ ಸಂಭಾಷಣೆಯನ್ನು ಒಳಗೊಂಡಿದೆ. ಇವರು ಕಲ್ಯಾಣ ಮಹೋತ್ಸವದ ಸಂಭ್ರಮದ ಬಗ್ಗೆ ಮಾತನಾಡಿಕೊಳ್ಳುವ ವೇಳೆ ಎಂತಹ ಚೆಲುವೆ ಪಾರ್ವತಿ, ಆದರೆ ಆಕೆಗೆ ಇಂತಹ ವರವೇನೋ ಎಂದು ಆಡಿಕೊಳ್ಳುವವಳು ಒಬ್ಬಾಕೆಯಾದರೆ, ಕೇವಲ ಹಣ ಸೌಂದರ್ಯ ಮುಖ್ಯವಲ್ಲ, ಗುಣ ವ್ಯಕ್ತಿತ್ವ ಮುಖ್ಯ ಎಂದು ತಿಳಿಸಿ ಹೇಳುವವಳು ಇನ್ನೊಬ್ಬಾಕೆ. ಹೀಗೆ ಇಬ್ಬರೂ ಮದುವೆ ಸಮಾರಂಭವನ್ನು ಸಂಭ್ರಮಿಸುವ ಒಂದು ತಮಾಷೆಯ ಕಥೆಯನ್ನು ಅಭಿನಯದ ಮೂಲಕ ಪ್ರಸ್ತುತ ಪಡಿಸಿದ್ದರು.
ಪತಿಯು ಮದುವೆಯಾದ ಹೊಸತರಲ್ಲಿ ತನ್ನ ಪತ್ನಿಗೆ ನೀಡುವಂತಹ ಕಾಳಜಿ, ಸಮಯ ಈಗೇಕೆ ನೀಡುವುದಿಲ್ಲ. ತನ್ನದೇ ವ್ಯವಹಾರ ಲೋಕದಲ್ಲಿ ಮುಳುಗಿರುವ ಪತಿಯೊಂದಿಗೆ ಮಾತನಾಡುವ ಬಯಕೆ ಪತ್ನಿಯದು. ಹೀಗಿರುವಾಗ ವಿಧವಿಧವಾಗಿ ಮಾತನಾಡಲು ಪ್ರಯತ್ನಿಸಿದರೂ ಪತಿ ಮಾತನಾಡದೆ ಇದ್ದಾಗ ಪತ್ನಿ ಬೇಸರದಲ್ಲಿ ಕುಳಿತುಕೊಳ್ಳದೆ, ಉಪಾಯ ಮಾಡಿ ಹೇಗೆ ಮಾತನಾಡುವಂತೆ ಮಾಡಬಹುದೆಂಬ ಪ್ರಸ್ತುತಿ ಜಾವಳಿ ನೃತ್ಯ ಅಭಿನಯ ಅಮೋಘವಾಗಿತ್ತು.
ವಿದುಷಿ ವಸುಂಧರಾ: ಈಕೆ ಗುರು ವಿದ್ವಾನ್ ಕೊಡವೂರು ಸುಧೀರ್ ರಾವ್ ಹಾಗು ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿದ್ದು ಕೆ.ಗುರುರಾಜ್ ಭಟ್ ಹಾಗೂ ಶ್ರೀಲತಾ ಭಟ್ ದಮಪತಿಗಳ ಸುಪುತ್ರಿ. ಬಿ.ಟೆಕ್ ಹಾಗೂ ಎಂ.ಟೆಕ್, ವ್ಯಾಸಂಗವನ್ನು ಎಸ್ ಎಮ್ ವಿ.ಐ.ಟಿ.ಎಮ್ ಮತ್ತು ಎಂ.ಐ.ಟಿ. ಯಲ್ಲಿ ಮುಗಿಸಿ ಪ್ರಸ್ತುತ ತನ್ನ ವಿದ್ಯಾಭ್ಯಾಸದ ತುಡಿತವನ್ನು ಕಡಿಮೆ ಮಾಡಿಕೊಳ್ಳದೆ ಬಿ.ಎಡ್ ಕಲಿಯುತ್ತಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಈಕೆ ಕಳೆದ 18 ವರ್ಷಗಳಿಂದ ನೃತ್ಯಭ್ಯಾಸವನ್ನು ನಡೆಸುತ್ತಿದ್ದು, ಇದರಲ್ಲಿ ಜೂನಿಯರ್, ಸೀನಿಯರ್ ಹಾಗು ವಿದ್ವತ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ತನ್ನ ಶಾಲಾ ಹಾಗೂ ಕಾಲೇಜಿನ ದಿನಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುತ್ತಾಳೆ.
ಭರತನಾಟ್ಯ ಮಾತ್ರವಲ್ಲದೆ ಯಕ್ಷಗಾನ , ಸಂಗೀತ ಹರಿಕಥೆಗಳಲ್ಲೂ ಅಭಿರುಚಿಯನ್ನು ಹೊಂದಿದ್ದಾಳೆ. ಇಷ್ಟು ಮಾತ್ರವಲ್ಲದೆ ಕೇಶಾಲಂಕಾರ ವರ್ಣಾಲಂಕಾರದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾಳೆ.