ಉಡುಪಿ: ಒಂದೂವರೆ ವರ್ಷದಿಂದ ಜನ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೆ ಸೊರಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಕೊನೆಗೂ ಸರಕಾರ ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಹೊರಡಿಸಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಅಧ್ಯಕ್ಷ, ಉಪಾ ಧ್ಯಕ್ಷರಿಗೆ ನಿಗದಿಗೊಳಿಸಿರುವ ಕರಡು ಮೀಸಲಾತಿ ಅಧಿಸೂಚನೆ ಅಧಿಕೃತವಾಗಿ ರಾಜ್ಯ ಪತ್ರದಲ್ಲಿ ಪ್ರಕಟ ಗೊಂಡಿದ್ದು ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.
ನಗರ ಸ್ಥಳೀಯ ಸಂಸ್ಥೆಗಳ ಕೆಲವು ಮೀಸಲಾತಿ ಮತ್ತು ಒಬಿಸಿ ಮೀಸ ಲಾತಿ ವಿಚಾರವಾಗಿ ಕೆಲವು ಮಂದಿ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಎರಡನೇ ಅವಧಿಗೆ ಸಕಾಲದಲ್ಲಿ ಚುನಾವಣೆ ನಡೆಯದೆ ಸದಸ್ಯರು ಅಧಿಕಾರ ವಂಚಿತರಾಗಿ ಆಡಳಿತಾಧಿ ಕಾರಿಗಳು ಅಧಿಕಾರ ನಡೆಸುತ್ತಿದ್ದರು.
ಅಧಿಸೂಚನೆ ಪ್ರಕಟಿಸಿದ 15 ದಿನದೊಳಗೆ ಕರಡು ಸಂಬಂಧಿಸಿ ಯಾವುದೇ ವ್ಯಕ್ತಿ ಸರಕಾರಕ್ಕೆ ಸಲ್ಲಿಸುವ ಆಕ್ಷೇಪಣೆ ಅಥವಾ ಸಲಹೆಯನ್ನು ಸರಕಾರ ಪರಿಗಣಿಸುತ್ತದೆ ಎಂದು ತಿಳಿಸಿರುವ ಸರಕಾರವು ಅಕ್ಷೇಪಣೆ ಅಥವಾ ಸಲಹೆಗಳನ್ನು ಸರಕಾರದ ಕಾರ್ಯದರ್ಶಿ, ನಗರಾ ಭಿವೃದ್ಧಿ ಇಲಾಖೆ, ವಿಕಾಸಸೌಧ, ಬೆಂಗಳೂರಿಗೆ ಸಲ್ಲಿಸಬಹುದು ಸೂಚಿಸಿದೆ.
15 ದಿನಗಳ ಅವಧಿ ಮುಗಿದ ಅನಂತರ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳು ಬಾರದೆ ಹೋದರೆ ಹೇಳಿದ ಕರಡು ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸರಕಾರ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ. ಅಧಿಸೂಚನೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಎಸ್‌ಸಿ, ಎಸ್‌ಸಿ (ಮಹಿಳೆ), ಎಸ್‌ಟಿ, ಎಸ್‌ಟಿ (ಮಹಿಳೆ), ಬಿಸಿಎಂ (ಅ), ಬಿಸಿಎಂ -ಎ(ಮಹಿಳೆ), ಬಿಸಿಎಂ- ಬಿ, ಬಿಸಿಎಂ-ಬಿ (ಮಹಿಳೆ), ಸಾಮಾನ್ಯ ಹಾಗೂ ಸಾಮಾನ್ಯ (ಮಹಿಳೆ) ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಿದೆ.
ಕರಡು ಮೀಸಲು ಅಂತಿಮಗೊಂಡ ಬಳಿಕ ರೋಸ್ಟರ್ ಪ್ರಕಾರ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ನಗರ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ಚುನಾವಣೆ ಘೋಷಣೆ ಮಾಡಲಿದೆ.