January 15, 2025
WhatsApp Image 2024-06-18 at 10.10.39 AM (1)

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ
ಸರಣಿ 50ರಲ್ಲಿ ಕುಮಾರಿಯರಾದ ಅನ್ವಿತ ತಂತ್ರಿ ಮತ್ತು ಅರ್ಪಿತ ತಂತ್ರಿ ಸಹೋದರಿಯರಿಂದ ಕಿಕ್ಕಿರಿದು ತುಂಬಿದ್ದ ಕೊಡವೂರು ದೇವಳದ ವಸಂತ ಮಂಟಪದಲ್ಲಿ ನೃತ್ಯಾರ್ಪಣೆ ಕಾರ್ಯಕ್ರಮವು ಅಮೋಘ ಅಭಿನಯದ ಮೂಲಕ ಸಂಪನ್ನಗೊಂಡಿತು.

ಭರತನಾಟ್ಯದಲ್ಲಿ ಸಮಕಾಲಿನ ನೃತ್ಯದೊಂದಿಗೆ ಸೈ ಎನಿಸಿಕೊಂಡ ಪ್ರಸ್ತುತಿಯು ಪೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.
ನೃತ್ಯಶಂಕರ ಸರಣಿ ಮೂಲಕ ಹಲವಾರು ಪ್ರತಿಭೆಗಳಿಗೆ ಶ್ರೀದೇವಳದಲ್ಲಿ ವೇದಿಕೆ ಅವಕಾಶ ಮಾಡಿಕೊಟ್ಟ ಸಂಯೋಜಕರ ಕೆಲಸ ಶ್ಲಾಘನೀಯ.

ಕೊಡವೂರು ನೃತ್ಯನಿಕೇತನದ ವಿದ್ವಾನ್ ಸುಧೀರ್ ರಾವ್ ಕೊಡವೂರು ಹಾಗು ವಿದುಷಿ ಮಾನಸಿ ಸುಧೀರ್ ಶಿಷ್ಯೆಯರಾದ ಈ ಸಹೋದರಿಯರು ವೇದಮೂರ್ತಿ ತೊಟ್ಟಂ ಮಧುಸೂದನ ತಂತ್ರಿ ಹಾಗು ಅಕ್ಷತಾ ತಂತಿಯವರ ಮುದ್ದಿನ ಕುವರಿಯರು.

ಭರವಸೆಯ ಕುವರಿಗಳಿವರು: ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ, ಪದವಿ ಪೂರ್ವ ಶಿಕ್ಷಣವನ್ನು ಎಂಜಿಎಂ ಕಾಲೇಜಿನಲ್ಲಿ ಪೂರೈಸಿ ಪ್ರಸ್ತುತ ಅನ್ವಿತ ದ್ವಿತೀಯ ಬಿ ಎಸ್ಸಿ ಪದವಿಯನ್ನು ಎಂಜಿಎಂ ಕಾಲೇಜಿನಲ್ಲಿ ಮುಂದುವರೆಸುತ್ತಿದ್ದಾಳೆ ಹಾಗು ಅರ್ಪಿತ ದ್ವಿತೀಯ ಪಿಯುಸಿ ಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಮುಗಿಸಿರುತ್ತಾಳೆ.

ತಂತ್ರಿ ಸಹೋದರಿಯರು ನೃತ್ಯನಿಕೇತನ ಕೊಡವೂರು ಸಂಸ್ಥೆಯಲ್ಲಿ ಕಳೆದ 15 ವರುಷಗಳಿಂದ ಭರತನಾಟ್ಯ ಅಭ್ಯಾಸವನ್ನು ಮಾಡಿ ವಿದ್ವತ್ ಅಂತಿಮ ಮತ್ತು ಪೂರ್ವ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಇವರು ಸಂಸ್ಥೆಯ ಮಳೆ ಬಂತು ಮಳೆ, ಚಿತ್ರಾ, ಶ್ರೀನಿವಾಸ ಕಲ್ಯಾಣ, ನಾರಸಿಂಹ ಮುಂತಾದ ನೃತ್ಯ ರೂಪಕ, ನೃತ್ಯ ನಾಟಕಗಳಲ್ಲಿ ಭಾಗವಹಿಸಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿರುತ್ತಾರೆ.

ವಿದ್ವಾನ್ ಭವಾನಿಶಂಕರ್ ನಿರ್ದೇಶನದ ಮೈಮೆದ ಬಬ್ಬು ಎಂಬ ತುಳು ನೃತ್ಯ ರೂಪಕದಲ್ಲಿಯೂ ಅಭಿನಯಿಸಿರುತ್ತಾರೆ. ಕರಾವಳಿಯ ಗಂಡು ಕಲೆ ಯಕ್ಷಗಾನದ ಬಡಗು ಹಾಗೂ ತೆಂಕುತಿಟ್ಟಿನ ಯಕ್ಷಗಾನ ಕಲಿಕೆಯಲ್ಲಿಯೂ ತಮ್ಮ ಛಾಪನ್ನು ಮೂಡಿಸಿ, ಬಡಾನಿಡಿಯೂರು ಕೇಶವ ರಾವ್ ಅವರ ಸನ್ಯಾಸಿ ಮಠ ಮಕ್ಕಳ ಮೇಳ ಹಾಗು ಯಕ್ಷಗಾನ ಕೇಂದ್ರದ ಗುರುಗಳಾದ ಸುಬ್ರಹ್ಮಣ್ಯ ಭಟ್, ಶೈಲೇಶ್ ತೀರ್ಥಹಳ್ಳಿ ಮತ್ತು ಕೃಷ್ಣಮೂರ್ತಿ ಭಟ್ ರವರ ಬಳಿಯೂ ಬಡಗುತಿಟ್ಟು ಯಕ್ಷಗಾನ ಕಲಿತು ರುಕ್ಮಿಣಿ, ಮದನಾಕ್ಷಿ, ರಂಭೆ, ಈಶ್ವರ, ಕಂಸ, ರುಚಿಮತಿ, ಮಾಲಿನಿ, ಅರ್ಜುನ, ಅಭಿಮನ್ಯು, ಮೈಂದ, ಗರುಡ, ಹನುಮಂತ, ರಾವಣ, ಧರ್ಮರಾಯ ಹೀಗೆ ಹತ್ತು ಹಲವಾರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಾಗೆಯೇ ತೆಂಕುತಿಟ್ಟಿನ ಯಕ್ಷಗಾನದಲ್ಲೂ ಪ್ರದ್ಯುಮ್ನ, ಯವನಾಶ್ವ, ಲಕ್ಷ್ಮಣ ಪಾತ್ರಗಳೂ ಕೂಡ ಗುರುಗಳಾದ ರಾಕೇಶ್ ರೈ ಅಡ್ಕ ರವರ ನೇತೃತ್ವದಲ್ಲಿ ಅಭಿನಯಿಸುತ್ತಾರೆ.

ಯಕ್ಷಗಾನ ಮುಮ್ಮೇಳ ಮಾತ್ರವಲ್ಲದೆ ಹಿಮ್ಮೇಳಗಳ ರುಚಿಯನ್ನು ಸವಿಯಲು ಮದ್ದಳೆ ಮತ್ತು ಚೆಂಡೆಯನ್ನು ನೆಕ್ಕರೆಮೂಲೆ ಗಣೇಶ್ ಭಟ್ ರವರ ಬಳಿ, ಭಾಗವತಿಕೆಯನ್ನು ಪುಂಡಿಕೈ ಗೋಪಾಲಕೃಷ್ಣ ಭಟ್ ರವರ ಬಳಿ ಅಭ್ಯಾಸ ಮಾಡಿರುತ್ತಾರೆ. ಜಾನಪದ ಕ್ಷೇತ್ರದಲ್ಲಿ ಗುರು ಹೇಮಂತ್ ರವರ ಕಲಾಮಯಂ ಸಂಸ್ಥೆಯಲ್ಲಿಯೂ ತರಬೇತಿ ಪಡೆದಿರುತ್ತಾರೆ.

ಹೆಣ್ಣು ಮಕ್ಕಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವಲ್ಲಿ ಗಟ್ಟಿಗರಾಗಲು ಗುರುಗಳಾದ ದಿ| ನಿತ್ಯಾನಂದ ಕೆಮ್ಮಣ್ಣು ರವರ ಬಳಿ ತರಬೇತಿ ಪಡೆದು ರಾಜ್ಯಮಟ್ಟದ ಬುಡೊಕಾನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಅನ್ವಿತ ಪಡೆದಿರುತ್ತಾಳೆ. ಪಾಶ್ಚಾತ್ಯ ನೃತ್ಯದ ಒಲವೂ ಕೂಡ ಗುರುಗಳಾದ ಪ್ರವೀಣ್, ಅಶೋಕ್, ಶ್ರೀನಿವಾಸ್ ರವರಿಂದ ಚಿಗುರೊಡೆದು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.

ಚಿತ್ರಕಲೆ, ಆಟೋಟ ಸ್ಪರ್ಧೆಗಳಲ್ಲೂ ಮುಂದಿದ್ದಾರೆ. ಗೈಡ್ಸ್ ತರಬೇತಿಯನ್ನು ಪಡೆದು ರಾಜ್ಯಪುರಸ್ಕಾರವನ್ನು ಪಡೆದಿರುತ್ತಾರೆ. ಸಂಗೀತ ಅಭ್ಯಾಸವನ್ನು ಗುರುಗಳಾದ ಉಷಾ ಹೆಬ್ಬಾರ್ ರವರ ಬಳಿ ಅಭ್ಯಾಸ ಮಾಡಿರುತ್ತಾರೆ. ಅರ್ಪಿತಾ ಈಜು ತರಬೇತಿಯನ್ನು ಪಡೆದಿರುತ್ತಾಳೆ. ಎನ್ ಸಿ ಸಿ ಸ್ವಯಂ ಸೇವಕಿಯರಾಗಿ ಬಿ ಮತ್ತು ಸಿ ಸರ್ಟಿಫಿಕೇಟ್ ನಲ್ಲಿ ಎ ಗ್ರೇಡ್ ಪಡೆದಿರುತ್ತಾರೆ. ಅನ್ವಿತ ಥಲ್ ಸೇನಾ ಶಿಬಿರದಲ್ಲಿ ಭಾಗವಹಿಸಿ ದೆಹಲಿಯಲ್ಲಿ ಕರ್ನಾಟಕ ಮತ್ತು ಗೋವಾವನ್ನು ಪ್ರತಿನಿಧಿಸಿರುತ್ತಾಳೆ. ರಾಷ್ಟ್ರೀಯ ಸೇವಾಯೋಜನೆಯ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿರುತ್ತಾಳೆ.

About The Author

Leave a Reply

Your email address will not be published. Required fields are marked *

You cannot copy content of this page.