ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು. ಇತ್ತೀಚಿನ ಸಂಶೋಧನೆಯ ಪ್ರಕಾರ ಸಕ್ಕರೆ ಕಾಯಿಲೆಗೆ ಇನ್ನೂ ಅನೇಕ ಕಾರಣಗಳಿವೆ. ನಮ್ಮ ಜೀವನ ಶೈಲಿ, ಒತ್ತಡ, ಆನುವಂಶಿಕತೆ ಇವೆಲ್ಲವೂ ಡಯಾಬಿಟಿಸ್‌ಗೆ ಕಾರಣವಾಗುತ್ತವೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಮಧುಮೇಹದ ನಿಯಂತ್ರಣ ಹೇಗೆ ಎಂಬುದನ್ನು ರೋಗಿಗಳು ತಿಳಿದಿರಬೇಕು.
ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಮಧುಮೇಹ ಸಂಭವಿಸುತ್ತದೆ. ಜೀವಕೋಶಗಳು ಇನ್ಸುಲಿನ್‌ಗೆ ನಿರೋಧಕವಾದಾಗ ಆಗುವ ಪ್ರಕ್ರಿಯೆ ಇದು. ಇನ್ಸುಲಿನ್ ಮೇಲೆ ಹೊರೆ ಹೆಚ್ಚಾಗದಿರಲಿ ಎಂಬ ಕಾರಣಕ್ಕೆ ಸಕ್ಕರೆ ತಿನ್ನದಂತೆ ಮಧುಮೇಹ ರೋಗಿಗಳಿಗೆ ಸಲಹೆ ನೀಡಲಾಗುತ್ತದೆ. ಡಯಾಬಿಟಿಸ್ ಇರುವವರು ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಹೊಂದಿರುವ ಆಹಾರವನ್ನು ಸಹ ತಿನ್ನಬಾರದು.
ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾಕಂದ್ರೆ ಆಹಾರದ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಆಹಾರವು ದೇಹದಲ್ಲಿನ ಇನ್ಸುಲಿನ್ ಮೇಲೆ ನೇರ ಪರಿಣಾಮ ಬೀರುತ್ತದೆ.
ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಪೂರಕವಾದಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅವುಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ರೋಗಿಗಳು ಧಾನ್ಯಗಳ ಆಯ್ಕೆ ಸಂದರ್ಭದಲ್ಲಿ ಕೂಡ ಎಚ್ಚರಿಕೆ ವಹಿಸಬೇಕು.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ರಾಗಿಯನ್ನು ಹೆಚ್ಚಾಗಿ ಬಳಸಬೇಕು. ರಾಗಿ ಬಹಳಷ್ಟು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ, ಇದು ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.