March 21, 2026
WhatsApp Image 2024-02-03 at 4.08.14 PM

ಮಂಗಳೂರು: ಮಳಲಿ ಮಸೀದಿ ವಕ್ಫ್ ಆಸ್ತಿ ಆದ್ದರಿಂದ ಮಂಗಳೂರು ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆ ನಡೆಸುವ ಅಧಿಕಾರವಿಲ್ಲವೆಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಜ್ಞಾನವಾಪಿ ಮಸೀದಿ ಮಾದರಿ ಮಂಗಳೂರಿನ ಮಳಲಿ ಮಸೀದಿಯನ್ನು ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿಸಬೇಕೆಂಬ ವಿಎಚ್‌ಪಿ ಒತ್ತಾಯಕ್ಕೆ ಬಲ ಬಂದಂತಾಗಿದೆ. ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಮಾದರಿಯ ಕಟ್ಟಡ ಪತ್ತೆಯಾದ ಬಳಿಕ ವಿಎಚ್‌ಪಿ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡುವಂತೆ ಒತ್ತಾಯ ಮಾಡಿತ್ತು.

ಈ ಬಗ್ಗೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿತ್ತು. ಇದೇ ವೇಳೆ, ಮಸೀದಿ ಕಮಿಟೆ ಹಿಂದುಗಳ ಪರ ದಾವೆಗೆ ಆಕ್ಷೇಪ ಸಲ್ಲಿಸಿ ‘ಮಸೀದಿಯು ವಕ್ಫ್ ಆಸ್ತಿಯಾಗಿದ್ದು, ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲು ಬರುವುದಿಲ್ಲ. ಈ ಕುರಿತು ಮೈಸೂರಿನ ಟ್ರಿಬ್ಯುನಲ್ ನಲ್ಲಿಯೇ ವಿಚಾರಣೆ ನಡೆಸಬೇಕು ಎಂದು ವಾದಿಸಿತ್ತು. ಆದರೆ ಮಸೀದಿ ಕಮಿಟಿಯ ವಾದವನ್ನು ಮಂಗಳೂರಿನ ನ್ಯಾಯಾಲಯ ಪುರಸ್ಕರಿಸಿರಲಿಲ್ಲ. ಅಲ್ಲದೆ, ಮಸೀದಿ ನವೀಕರಣ ಮಾಡದಂತೆ ಮಂಗಳೂರಿನ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಮಂಗಳೂರು ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಸೀದಿ ಕಮಿಟಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲಿ ವಾದ- ಪ್ರತಿವಾದ ನಡೆದು ಸದ್ಯ ವಿಚಾರಣೆ ಮುಗಿದಿದೆ. ಇದೀಗ ಹೈಕೋರ್ಟ್‌ ಮಸೀದಿ ಕಮಿಟಿಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ. ಮಸೀದಿ ಕಮಿಟಿಯ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿರುವುದು ವಿಎಚ್ ಪಿ ಹೋರಾಟಕ್ಕೆ ಬಲ ಬಂದಂತಾಗಿದೆ. ಅಲ್ಲದೆ, ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿಯೇ ವಿಚಾರಣೆ ಮುಂದುವರಿಸಲು ಅನುಮತಿ ನೀಡಿದ್ದಾಗಿ ತಿಳಿದುಬಂದಿದೆ. ಹೈಕೋರ್ಟ್ ತೀರ್ಪು ಇನ್ನಷ್ಟೇ ಕೈಸೇರಬೇಕಿದ್ದು, ತೀರ್ಪಿನಲ್ಲೇನಿದೆ ಎನ್ನುವ ಬಗ್ಗೆ ಈಗಲೇ ಹೇಳಲಾಗದು ಎಂದು ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.