December 23, 2024
kum

ಬೆಳ್ತಂಗಡಿ: ಶತ್ರು ನಾಶಕ್ಕಾಗಿ ಪ್ರತ್ಯಂಗಿರಾ ಹೋಮ ಮಾಡಿಸಿದ ಕುಮಾರಸ್ವಾಮಿ!

ಬೆಳ್ತಂಗಡಿ, ಏ.16:  ಶತ್ರು ನಾಶಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತ್ಯಂಗಿರಾ ಹೋಮ ಮಾಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀ ವನದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದಾರೆ. ಒಟ್ಟು ಐದು ದಿನ 12 ಜನರ ತಂಡದಿಂದ ವಿವಿಧ ಹೋಮ-ಪೂಜೆ‌ಗಳನ್ನ ಮಾಡಲಾಗಿದೆ. ನಿನ್ನೆ(ಶನಿವಾರ) ಸಂಜೆ ಖುದ್ದು ಕುಮಾರಸ್ವಾಮಿಯಿಂದ ಪೂರ್ಣಾಹುತಿ ಮಾಡಲಾಗಿದೆ. 

ಇಂದು(ಭಾನುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ದೇವಸ್ಥಾನ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ ಅವರು, ಹಾಸನ ಟಿಕೆಟ್ ಗೊಂದಲ ನಿವಾರಣೆಗೆ ಕುಮಾರಸ್ವಾಮಿ ಅವರು ಪೂಜೆ ಸಂದರ್ಭದಲ್ಲಿ ಪ್ರತ್ಯಂಗಿರಾ ಹೋಮ ಕೂಡ ಮಾಡಿಸಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗಬೇಕು ಅಂತ ಸಂಕಲ್ಪ ಮಾಡಲಾಗಿದೆ. ಪಂಚದುರ್ಗಾ ಹೋಮ, ರಾಜದುರ್ಗಾ ಹೋಮ, ವನದುರ್ಗ ಹೋಮಗಳನ್ನ ಮಾಡಲಾಗಿದೆ ಅಂತ ಮಾಹಿತಿ ನೀಡಿದ್ದಾರೆ. 

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ 

ಹೋಮ ಹವನದ ಬಳಿಕ ಕುಮಾರಸ್ವಾಮಿ ಇಂದು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೊದಲು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕುಮಾರಸ್ವಾಮಿಗೆ ಡಾ.ವೀರೇಂದ್ರ ಹೆಗ್ಗಡೆ ಬೆಳ್ಳಿಯ ರುದ್ರಾಕ್ಷಿ ಮಾಲೆ ಹಾಕಿ ಸನ್ಮಾಸಿದ್ದಾರೆ. ನಂತರ ಮಂಜುನಾಥನ ದರ್ಶನವನ್ನ ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ. 

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ನೀಡಿದ್ದು ಅವರ ಪಕ್ಷದ ಆಂತರಿಕ ಬೆಳವಣಿಗೆಯಾಗಿದೆ. ಅವರು ಅನುಭವಿ ರಾಜಕಾರಣಿ, ಜನಸಂಘದಿಂದ ಬಂದವರಾಗಿದ್ದರು. ಅವರಂಥವರೇ ಇಂಥ ನಿರ್ಧಾರ ಮಾಡ್ತಾ ಇದಾರೆ. ನಾನು ಈ ಹಿಂದೆ ಬಿಜೆಪಿಯಲ್ಲಿ ಇರೋ ಡಿಎನ್‌ಎ ಬಗ್ಗೆ ಮಾತನಾಡಿದ್ದೆ, ಬಹುಶಃ ಆ ಮಾತು ಇವತ್ತಿನ ಅಲ್ಲಿನ ಚಟುವಟಿಕೆಗಳಿಗೆ ಪೂರಕವಾಗಿದೆ. ಜಗದೀಶ್ ಶೆಟ್ಟರ್ ಅವರು ನಮ್ಮನ್ನ ಅವರು ಸಂಪರ್ಕ ಮಾಡಿಲ್ಲ, ನಮಗೆ ಅಂಥ ದೊಡ್ಡ ನಾಯಕರ ಅವಶ್ಯಕತೆ ಇಲ್ಲ. ಸಣ್ಣವರು ಯಾರಾದ್ರೂ ಬಂದರೆ ನಾವು ತೆಗೋತೀವಿ. ಅಂಥ ದೊಡ್ಡ ನಾಯಕರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳೊದು ಬಹಳ ಆಸೆ ಆಗುತ್ತೆ. ಕಾಂಗ್ರೆಸ್ ಜೊತೆ ಮಾತುಕತೆ ಮಾಡಿದ್ರೆ ಅದು ಅವರಿಗೆ ಸೇರಿದ್ದು, ನಮಗೆ ಸಂಬಂಧ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. 

About The Author

Leave a Reply

Your email address will not be published. Required fields are marked *

You cannot copy content of this page.