ನಾಲ್ಕು ದಿನಗಳ ಹಿಂದೆ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ವೇಳೆ ದಂಪತಿ ಸಾವಿನ ರಹಸ್ಯ ಬಯಲಾಗಿದೆ. ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪುತ್ರನೇ ಪೋಷಕರಿಗೆ ವಿಷ ಹಾಕಿಕೊಲೆ ನಡೆಸಿದ ಕೃತ್ಯ ಬಯಲಾಗಿದೆ. ಮಂಜುನಾಥ್ (27) ತಿಂಡಿಗೆ ವಿಷ ಬೆರಸಿ ತಂದೆ ತಾಯಿಯನ್ನು ಕೊಲೆ ಮಾಡಿದ ಆರೋಪಿ. ಮಂಜುನಾಥ್ ವಿಧವೆ ಒಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿಗೆ ತಂದೆ-ತಾಯಿ ಬುದ್ಧಿವಾದ ಹೇಳಿದ್ದರು. ಅಲ್ಲದೇ ಸಹಕಾರ ಸಂಘಗಳಲ್ಲಿ ಆತನ ತಾಯಿ ಉಮಾ (48)ಮಾಡಿದ್ದ ಸಾಲದ ಹಣವನ್ನು ಆರೋಪಿ ದುರುಪಯೋಗ ಪಡಿಸಿಕೊಂಡಿದ್ದ. ಹಣವನ್ನು ವಾಪಸ್ ಕೇಳಿದ್ದಕ್ಕೂ ಆರೋಪಿ ಪೋಷಕರ ಮೇಲೆ ಸಿಟ್ಟಾಗಿದ್ದ. ಇದರಿಂದ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ಪಲಾವ್‍ನಲ್ಲಿ ವಿಷ ಬೆರೆಸಿ ತಂದೆ ಹಾಗೂ ತಾಯಿಯನ್ನು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ತಾಯಿಗಿಂತ ಮೊದಲೇ ಪಲಾವ್ ತಿಂದು ನಂತರ ಪಲಾವ್‍ಗೆ ಕಳೆನಾಶಕ ಬೆರೆಸಿದ್ದ. ತಂದೆ ತಾಯಿ-ತಿಂಡಿ ತಿಂದ ಬಳಿಕ ಆರೋಪಿ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ. ಬಳಿಕ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಕರೆತಂದಿದ್ದ. ಬಳಿಕ ತಾಯಿ ಉಮಾ ಹಾಗೂ ತಂದೆ ನಂಜುಂಡಪ್ಪ (55) ಹಠಾತ್ ಆಗಿ ಸಾವಿಗೀಡಾಗಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಂಪತಿಯ ಕಿರಿಯ ಪುತ್ರ ಕೊಣನೂರು ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಪೊಲೀಸರು ಅಂತ್ಯಕ್ರಿಯೆ ತಡೆದು ಮರಣೋತ್ತರ ಪರೀಕ್ಷೆಗೆ ಶವಗಳನ್ನು ಸಾಗಿಸಿದ್ದರು. ಬಳಿಕ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮಂಜುನಾಥ್‍ನನ್ನು ತನಿಖೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ವಿಷ ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.