ಜ್ಯೋತಿಷಿ ಮಾತು ಕೇಳಿ ಗಂಡನನ್ನೇ ಕೊಂದ ಲೇಡಿ ಎಸ್​ಐ..!

ಕೃಷ್ಣಗಿರಿ: ಸಹಚರರೊಂದಿಗೆ ಸೇರಿ ತನ್ನಿಂದ ಬೇರ್ಪಟ್ಟ ಪತಿಯನ್ನು ಮಹಿಳಾ ಸಬ್​ ಇನ್ಸ್​ಪೆಕ್ಟರ್​, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈನಲ್ಲಿ ಶನಿವಾರ ರಾತ್ರಿ ನಡೆದಿದೆ.

ಸೆಂಥಿಲ್​​ ಕುಮಾರ್​ (48) ಮೃತ ದುರ್ದೈವಿ. ಉತ್ತಂಗರೈ ಮೂಲದ ಎಸ್​. ಚಿತ್ರಾ (47), ಉತ್ತಂಗರೈನ ಭಾರತೀಪುರಂ ಮೂಲದ ಎಂ ಸರೋಜಾ (37) ಮತ್ತು ಎಸ್. ವಿಜಯ ಕುಮಾರ್ (33) ಹಾಗೂ ತೂತುಕುಡಿಯ ರಾಜ ಪಾಂಡಿಯನ್ ಬಂಧಿತ ಆರೋಪಿಗಳು. ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಿಂಗಾರಪೇಟೈ ಪೊಲೀಸ್​ ಠಾಣೆಯಲ್ಲಿ ವಿಶೇಷ ಸಬ್​ ಇನ್ಸ್​ಪೆಕ್ಟರ್​ ಆಗಿದ್ದ ಚಿತ್ರಾ, ಕಲ್ಲವಿ ಮೂಲದ ಸೆಂಥಿಲ್​ ಕುಮಾರ್​ ಜೊತೆ ಅನೇಕ ವರ್ಷಗಳ ಹಿಂದೆ ಮದುವೆ ಆಗಿದ್ದಳು. ಸೆಂಥಿಲ್​ ಸಹ ಪೊಲೀಸ್​ ವೃತ್ತಿಯಲ್ಲಿದ್ದ. ಮೂಲಗಳ ಪ್ರಕಾರ ಪೊಲೀಸ್​ ವಾಹನವನ್ನು ಕೆರೆಗೆ ನೂಕಿದ್ದು ಸೇರಿದಂತೆ ಹಲವು ಗಂಭೀರ ಆರೋಪದ ಮೇಲೆ ಸೆಂಥಿಲ್​ನನ್ನು 2012ರಲ್ಲಿ ವಜಾಗೊಳಿಸಲಾಗಿತ್ತು.

ಮದುವೆಯಾಗಿದ್ದ ಚಿತ್ರಾ ಕೆಲವು ವರ್ಷಗಳಿಂದ ಗಂಡನಿಂದ ಬೇರೆಯಾಗಿದ್ದರು. ಬಳಿಕ ತನ್ನ ಕಾರು ಚಾಲಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಇದು ಸೆಂಥಿಲ್​ಗೆ ತಿಳಿದು, ಕಾರು ಚಾಲಕ ಪಾವಕ್ಕಲ್‌ನ ಎ. ಕಮಲರಾಜ್ (37) ಜೊತೆಗಿನ ಸಂಬಂಧವನ್ನು ಮುಂದುವರಿಸಿದಂತೆ ಎಚ್ಚರಿಕೆ ನೀಡಿದ್ದನು. ಆದರೂ ಚಿತ್ರಾ ಸಂಬಂಧ ಮುಂದುವರಿಸಿದ್ದರು.

ಇದಾದ ಬಳಿಕ ಚಿತ್ರಾ, ಹಸ್ತಸಾಮುದ್ರಿಕ ಸರೋಜಾ ಅವರನ್ನು ಭೇಟಿಯಾಗಿ, ತಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಸರೋಜಾ, ಪತಿಯನ್ನು ಕೊಲೆ ಮಾಡುವಂತೆ ಚಿತ್ರಾಗೆ ಸೂಚಿಸಿದ್ದಳು. ಗಂಡನ ಕೊಲೆಗೆ ಆಳುಗಳನ್ನು ಕಳುಹಿಸುವುದಾಗಿ ಹೇಳಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು.

ಸೆಪ್ಟೆಂಬರ್ 16 ರಂದು ಚಿತ್ರಾ ತನ್ನ ಪತಿಯನ್ನು ರೌಡಿಗಳ ಸಹಾಯದಿಂದ ಕೊಲೆ ಮಾಡಿ ಶವವನ್ನು ಉತ್ತಂಗರೈ ಎಂಬಲ್ಲಿನ ಬಾವಿಗೆ ಎಸೆದಿದ್ದಳು. ಸೆಂಥಿಲ್ ಅವರ ತಾಯಿ ಬಕ್ಕಿಯಂ ಅವರು ಅಕ್ಟೋಬರ್ 31 ರಂದು ತನ್ನ ಮಗ ಕಾಣೆಯಾಗಿದ್ದಾರೆ ಎಂದು ಕೃಷ್ಣಗಿರಿ ಕಲೆಕ್ಟರೇಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ನವೆಂಬರ್ ಎರಡನೇ ವಾರದಲ್ಲಿ ಕಲ್ಲಾವಿ ಪೊಲೀಸರಿಗೆ ರವಾನಿಸಲಾಗಿತ್ತು.

ತನಿಖೆಯ ಭಾಗವಾಗಿ ಉತ್ತಂಗರೈ ಪೊಲೀಸರು ದಂಪತಿಯ 19 ವರ್ಷದ ಮಗ ಮತ್ತು ಕಮಲರಾಜ್‌ನನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಸೆಂಥಿಲ್‌ನನ್ನು ಕೊಲೆ ಮಾಡಿರುವುದಾಗಿ ಕೃಷ್ಣಗಿರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ವಿಚಾರಣೆ ಬಳಿಕ ಶನಿವಾರ ಬಾವಿಯಿಂದ ಸೆಂಥಿಲ್ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ.

ಆರೋಪಿ ಚಿತ್ರಾ, ಸರೋಜಾ, ವಿಜಯ ಕುಮಾರ್ ಮತ್ತು ರಾಜ ಪಾಂಡಿಯನ್ ಅವರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಉತ್ತಂಗರೈ ಪೊಲೀಸ್ ಇನ್ಸ್‌ಪೆಕ್ಟರ್ ಪಾರ್ಥಿಬನ್ ನೇತೃತ್ವದಲ್ಲಿ 15 ಪೊಲೀಸ್ ಸಿಬ್ಬಂದಿಯೊಂದಿಗೆ ಮೂರು ವಿಶೇಷ ತಂಡ ಪ್ರಕರಣದ ಇತರ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ.

Check Also

ಪುತ್ತೂರು : ಅಪಪ್ರಚಾರಕ್ಕೆ ಮನನೊಂದು ಯುವತಿ ಆತ್ಮಹತ್ಯೆ..!!

ಪುತ್ತೂರು : ಅಪಪ್ರಚಾರಕ್ಕೆ ಮನನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದಿದೆ. ಕಾಣಿಯೂರು ಗ್ರಾಮದ ಅನಿಲ …

Leave a Reply

Your email address will not be published. Required fields are marked *

You cannot copy content of this page.