ಕೊಪ್ಪಳ: ವಿದ್ಯುತ್ ಸ್ಪರ್ಶದಿಂದ ಬಾಲಕ ಗಂಭೀರ ಗಾಯಗೊಂಡು ತನ್ನ ಜ್ಞಾಪಕ ಶಕ್ತಿಯನ್ನೇ ಕಳೆದುಕೊಂಡ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. ಅಕ್ರಮವಾಗಿ ವಿದ್ಯುತ್ ಬಳಸಿ ನೀರಿನ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದ ಆಟದ ಮೈದಾನದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಗುತ್ತಿಗೆದಾರ ಮಹದೇವಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ.
ಮೈಲಾಪುರ ಗ್ರಾಮದಲ್ಲಿ ಗುತ್ತಿಗೆದಾರ ಮಹದೇವಪ್ಪ ಎಂಬವರು ಅನಧಿಕೃತ ವಿದ್ಯುತ್ ಬಳಸಿ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಬೇಕಾಬಿಟ್ಟಿ ಆಟದ ಮೈದಾನದಲ್ಲಿ ವಿದ್ಯುತ್ ವೈರ್ಗಳನ್ನು ಎಸೆದಿದ್ದರು. ಈ ಸ್ಥಳದಲ್ಲಿ ವೀರೇಶ್ (10) ಎಂಬ ಬಾಲಕ ಆಟವಾಡುತ್ತಿದ್ದಾಗ ವಿದ್ಯುತ್ ವೈರ್ ಸ್ಪರ್ಶಗೊಂಡು ವಿದ್ಯುತ್ ಪ್ರವಹಿಸಿದೆ. ಘಟನೆಯಲ್ಲಿ ಬಾಲಕನ ಕೈಗೆ ಗಾಯಗಳಾಗಿದ್ದು, ಜ್ಞಾಪಕ ಶಕ್ತಿ ಕೂಡ ಕಳೆದುಕೊಂಡಿದ್ದಾನೆ.
ದುರ್ಘಟನೆ ಸಂಬಂಧ ಗುತ್ತಿಗೆದಾರ ಮಹಾದೇವಪ್ಪ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾಪಂಚಾಯತ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ಶಾಲೆಯೊಂದರಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಪಾರಿವಾಳ ಹಿಡಿಯುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತದಾದರೂ ಓರ್ವ ಬಾಲಕ ಕೊನೆಯುಸಿರೆಳೆದಿದ್ದನು