ವೇಣೂರು, ಪಡ್ಡಂದಡ್ಕ, ನಾರಾವಿ ಕಾಂಗ್ರೆಸ್ ಪ್ರಚಾರ ಸಭೆ. ಮಂಜುನಾಥನ ಮೇಲೆ ಆಣೆ, ಅಧಿಕಾರಕ್ಕೆ ಬಂದರೆ `ಗ್ಯಾರಂಟಿ’ ಅನುಷ್ಠಾನ: ವಸಂತ ಬಂಗೇರ

ವೇಣೂರು, ಮೇ 3: ಕಾಂಗ್ರೆಸ್ ನೀಡಿರುವ 6 ಗ್ಯಾರಂಟಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಿಂಗಳೊಳಗೆ ಅನುಷ್ಠಾನ ಮಾಡುತ್ತೇವೆ. ಮಂಜುನಾಥನ ಮೇಲೆ, ಏಸು, ಅಲ್ಲಾವುನ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ವೇಣೂರು, ಪಡ್ಡಂದಡ್ಕ ಹಾಗೂ ನಾರಾವಿಯಲ್ಲಿ ಜರಗಿದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

40 ಪರ್ಸೆಂಟ್ ಸರಕಾರ
ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಆರ್ಥಿಕವಾಗಿ ಎಲ್ಲರನ್ನು ಸದೃಢವನ್ನಾಗಿ ಮಾಡಿತ್ತು. ಆದರೆ ಕಳೆದ ಏಳೆಂಟು ವರ್ಷಗಳಿಂದೀಚೆ ಬೆಲೆ ಏರಿಕೆಯಿಂದ ಜನ ಕಣ್ಣೀರು ಹಾಕುವಂತಾಗಿದೆ. ತಾಲೂಕು, ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಬಿಜೆಪಿ ಸರಕಾರದ 40 ಪರ್ಸೆಂಟ್ ಇದೆ. ರೂ. 1 ಕೋಟಿ ಬೇಕಾಗುವ ಕ್ರಿಯಾಯೋಜನೆಗೆ ಇಲ್ಲಿದ್ದ ಶಾಸಕರು 2 ಕೋಟಿ ಕ್ರಿಯಾ ಯೋಜನೆ ಮಾಡಿಸುತ್ತಾರೆ. ಕೇವಲ 5 ವರ್ಷ ಶಾಸಕರಾಗಿದ್ದ ಅವರು ಕಮಿಷನ್ ಮೂಲಕ ಕೋಟ್ಯಂತರ ಹಣ ಸಂಗ್ರಹಿಸಿ ಚುನಾವಣೆಗೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ನಾನು 25 ವರ್ಷ ಶಾಸಕನಾಗಿದ್ದರೂ ನಾನು ರಾಜಕೀಯದಲ್ಲಿ ನಯಾಪೈಸೆ ಸಂಪಾದಿಸಿಲ್ಲ. ಇಂತಹ ಭ್ರಷ್ಟ ಆಡಳಿತ ಇಲ್ಲಿನ ಜನತೆಗೆ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ರಕ್ಷಿಸಿಕೊಂಡು ಬಂದಿದೆ
ಪ್ರಚಾರ ಪ್ರಭಾರಿ ಎಂ.ಜಿ. ಹೆಗಡೆ ಮಾತನಾಡಿ, ಚುನಾವಣೆ ಸಂದರ್ಭ ಬೆಲೆ ಏರಿಕೆ ಚರ್ಚೆಯಾಗಬೇಕು. ಭಾವನಾತ್ಮಕ ರಾಜಕಾರಣಕ್ಕೆ ಮತ ನೀಡಬೇಡಿ. ಪುರಾತನ ಹಿಂದೂ ಧಾರ್ಮಿಕ ಕ್ಷೇತ್ರಗಳ ರಕ್ಷಿಸಿಕೊಂಡು ಬಂದ ಕೀರ್ತಿ ಕಾಂಗ್ರೆಸ್ ಪಕ್ಷದ್ದು. ಮೊದಲ ಬಾರಿ ವೇದ, ಉಪನಿಷತ್‌ಗಳ ಭಾಷೆಯ ಸಂಸ್ಕೃತದ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿದ್ದು ಕಾಂಗ್ರೆಸ್. ಎಲ್ಲರನ್ನು ಸಮಾನವಾಗಿ ಕಾಣುವುದು ಕಾಂಗ್ರೆಸ್ ಸಿದ್ದಾಂತ, ಅದುವೇ ಹಿಂದು ಧರ್ಮ ಎಂದರು.
ಸಾವಿರಾರು ವರ್ಷಗಳ ಹಿಂದಿನ ಮುಸ್ಲಿಮರ ಆಕ್ರಮಣದ ನೆಪವನ್ನು ಮುಂದಿಟ್ಟುಕೊಂಡು ಈಗ ನಾವು ಜಗಳ ಕಾಯಬೇಕಾ? ಆದರ್ಶ, ಭಾವನೆ, ದ್ಯೇಯಗಳು ಸಮಾನವಾಗಲಿ. ಜಾತಿ ಮತವನ್ನು ಮೀರಿ ಎಲ್ಲರನ್ನು ಸಮಾನವಾಗಿ ಕಾಣುವುದು ಕಾಂಗ್ರೆಸ್ ಸಿದ್ದಾಂತ ಎಂದರು.

ಅಭಿವೃದ್ಧಿಯ ವಿಚಾರದಲ್ಲಿ ಚರ್ಚೆಯಾಗಲಿ
ಹಿಂದೂ ರಾಷ್ಟ್ರ ಆಗುತ್ತದೆ, ಮುಸ್ಲಿಂ ರಾಷ್ಟ್ರ ಆಗುತ್ತದೆ ಅನ್ನುವುದು ಚುನಾವಣೆ ಸಂದರ್ಭದ ಪ್ರಬುದ್ದವಾದ ಚರ್ಚೆಯ ವಿಷಯವಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಚರ್ಚೆಯಾಗಬೇಕು. ಹಳ್ಳಿಯ ಬಡವರ ಬಗೆಗೆ ಚರ್ಚೆಯಾಗಬೇಕು., ವಸಂತ ಬಂಗೇರರ ತಾಲೂಕಿಗೆ ಏನೆಲ್ಲ ಕೊಡುಗೆ ಕೊಟ್ಟಿದ್ದಾರೆ, ಹರೀಶ್ ಪೂಂಜರು ತಾಲೂಕಿಗೆ ಏನೇನು ಕೊಟ್ಟಿದ್ದಾರೆ. ಅದು ಚರ್ಚೆಯ ವಿಚಾರವಾಗಲಿ. ಅದು ಬಿಟ್ಟು ಧರ್ಮದ ಜನರೊಳಗೆ ಧ್ವೇಷ ಹುಟ್ಟಿಸುವುದು ಸರಿಯಲ್ಲ. ಇಂದೂ ಕೂಡಾ ಆರೋಗ್ಯ ಕ್ಷೇತ್ರ ಮನೆಮನೆಗೆ ತಲುಪಿಲ್ಲ. ಅಗತ್ಯ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈ ಬಗ್ಗೆ ಚರ್ಚೆಯಾಗಬೇಕು. ಕಾಂಗ್ರೆಸ್ ಅಭಿವೃದ್ದಿ, ಬಡವರ ಏಳಿಗೆಯನ್ನೇ ಮುಂದಿಟ್ಟುಕೊಂಡು ಚುನಾವಣೆ ಎದರಿಸುತ್ತಾ ಬಂದಿದೆ ಎಂದವರು ಹೇಳಿದರು.

ರಾಜ್ಯದ ಜಿಎಸ್‌ಟಿ ಪಾಲನ್ನು ಕೇಂದ್ರ ನೀಡಿಲ್ಲ. ದೊಡ್ಡದೊಡ್ಡ ಶ್ರೀಮಂತ ಕೈಗಾರಿಕೋದ್ಯಮಿಗಳಿಗೆ ಕೋಟ್ಯಂತರ ರೂ. ಬ್ಯಾಂಕಿನ ಸಾಲ ಮನ್ನಾ ಮಾಡಲು ನಿಮ್ಮಲ್ಲಿ ಹಣ ಇದೆ ಅಂತಾದರೆ ಪಾಪದವರಿಗೆ ಗ್ಯಾರಂಟಿ ಕೊಡಲು ಕಾಂಗ್ರೆಸ್‌ಗೆ ತಾಕತ್ತಿದೆ. ಪರಿಸರ, ಮರಗಿಡಗಳನ್ನು ರಕ್ಷಿಸುವ ರಕ್ಷಿತ್‌ಗೆ ನಿಮ್ಮ ಮತ ನೀಡಿ ಎಂದರು.

ಕಾಂಗ್ರೆಸ್ ಅಭ್ಯೃರ್ಥಿ ರಕ್ಷಿತ್ ಶಿವರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಪಕ್ಷದ ಪ್ರಮುಖರಾದ ಎ. ಜಯರಾಮ ಶೆಟ್ಟಿ, ರಮೇಶ್ ಪೂಜಾರಿ ಪಡ್ಡಾಯಿಮಜಲು, ಹರೀಶ್ ಕುಮಾರ್ ಪೊಕ್ಕಿ, ಧರಣೇಂದ್ರ ಕುಮಾರ್, ನಿತೀಶ್ ಎಚ್. ಸತೀಶ್ ಕಾಶಿಪಟ್ಣ, ಸತೀಶ್ ಕಜಿಪಟ್ಟ ಸತೀಶ್ ಹೆಗ್ಡೆ ಮತ್ತಿತ್ತರರ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ ಸ್ವಾಗತಿಸಿ, ನಿರ್ವಹಿಸಿದರು.

————————–

ಕೊರೊನಾ ರೋಗ ಅಲ್ಲ, ಅದು ಬಿಜೆಪಿ ರೋಗ!
ದೇಶಕ್ಕೆ 1947ಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಕಳೆದ 9 ವರ್ಷಗಳ ಹಿಂದೆಯಷ್ಟೇ ಕೇಂದ್ರದಲ್ಲಿ ಮೋದಿ ಆಡಳಿತ ಬಂದಿದೆ. ಈ ಸರಕಾರ ದೇಶಕ್ಕೆ, ರಾಜ್ಯಕ್ಕೆ ಬೇಕಾ? ಕೊರೊನಾ ರೋಗ ಅಲ್ಲ, ಅದು ಬಿಜೆಪಿ ರೋಗ ಬಂದಿತ್ತು. ಆ ಸಂದರ್ಭ ಮೋದಿ ಎಲ್ಲಿದ್ದರು. ಬೊಮ್ಮಾಯಿ ಎಲ್ಲಿದ್ದರು. ಪೂಂಜರು ಎಲ್ಲಿದ್ದರು. ಆ ಕಷ್ಟಕಾಲದಲ್ಲಿ ಸಿದ್ದರಾಮಯ್ಯ ಜಾರಿಗೆ ತಂದಿದ್ದ 7 ಕೆ.ಜಿ. ಅಕ್ಕಿ ಬಡವರಿಗೆ ಜೀವ ನೀಡಿದೆ.
ಕೆ. ವಸಂತ ಬಂಗೇರ, ಮಾಜಿ ಶಾಸಕ

Check Also

ಉಳ್ಳಾಲ ಬೀಚ್ ನಲ್ಲಿ ಮರಳಿನ‌ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ: ದಿನಾಂಕ 19-04-2024 ಉಳ್ಳಾಲ ಬೀಚ್ ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ …

Leave a Reply

Your email address will not be published. Required fields are marked *

You cannot copy content of this page.