ಧಾರವಾಡ: ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ಕಾರಕ ಗಡ್ಡೆಯನ್ನು ಹೊರ ತೆಗೆದ ಅಪರೂಪದ ಘಟನೆ ಧಾರವಾಡದಲ್ಲಿ ನಡೆದಿದೆ.
ಹಿರಿಯ ಪ್ರಾಣಿ ವೈದ್ಯ ಡಾ. ಅನಿಲ್‌ಕುಮಾರ್ ಪಾಟೀಲ್ ಅವರು ಈ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ಮನೆಯೊಂದರಲ್ಲಿ ಹಾವು ಸೇರಿಕೊಂಡಿರುವ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಉರಗ ರಕ್ಷಕ ಸೋಮಶೇಖರ್ ಚೆನ್ನಶೆಟ್ಟಿ ಅವರ ಕೂಡಲೇ ಆ ಮನೆಗೆ ಹೋಗಿ ಟ್ರಿಂಕೆಟ್ ಎಂಬ ವಿಷಕಾರಿಯಲ್ಲದ ಹಾವನ್ನು ರಕ್ಷಿಸಿದ್ದರು. ಈ ವೇಳೆ ಹಾವಿನ ತಲೆಯಲ್ಲಿ ಗೆಡ್ಡೆ ಇರುವುದು ಗೊತ್ತಾಗಿತ್ತು.ಕೂಡಲೇ ಅದನ್ನು ಡಾ. ಅನಿಲ್‌ಕುಮಾರ್ ಪಾಟೀಲ್ ಅವರ ಬಳಿ ಕೊಂಡೊಯ್ದರು. ವೈದ್ಯರು ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆ ಹೊರ ತೆಗೆಯಲು ನಿರ್ಧರಿಸಿದರು. ಬಳಿಕ ಅದಕ್ಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.
ಹಾವುಗಳು ಸೂಕ್ಷ್ಮ ಜೀವಿಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡುವುದೇ ಸವಾಲು. ಈ ಟ್ರಿಂಕೆಟ್ ಹಾವಿಗೆ ತಲೆ ಮತ್ತು ಕಣ್ಣಿನ ಭಾಗದಲ್ಲಿ ಗೆಡ್ಡೆ ಬೆಳವಣಿಗೆ ಆಗಿತ್ತು. ಸುಮಾರು ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆಗೊಳಪಡಿಸಿ ಗೆಡ್ಡೆಯನ್ನು ಹೊರ ತೆಗೆಯಲಾಯಿತು ಎಂದು ಡಾ. ಅನಿಲ್‌ಕುಮಾರ್ ಪಾಟೀಲ್ ಹೇಳಿದ್ದಾರೆ.
ಹಾವಿಗೆ ಮುಂದಿನ ಎರಡು ದಿನ ಕಾಲ ಡ್ರೆಸ್ಸಿಂಗ್ ಅಗತ್ಯವಿದೆ. ಸೋಮಶೇಖರ್ ಅವರೇ ಹಾವನ್ನು ಆರೈಕೆ ಮಾಡಲಿದ್ದಾರೆ. ಮುಂದೆ ಅದೇ ಜಾಗದಲ್ಲಿ ಟ್ಯೂಮರ್ ಬೆಳವಣಿಗೆಯಾಗುವುದೇ ಎಂಬುದನ್ನೂ ಗಮನಿಸಬೇಕಿದೆ ಎಂದಿದ್ದಾರೆ.