ಮಂಗಳೂರು: ಬೆಂಗಳೂರಿನ ಮಲ್ಲೇಶ್ವರಂನ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಳೂರು ಬಳಿ ನಡೆದಿದೆ. ಮಹಿಳೆಯ ಪತಿ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು, ಅವರು ಸಾಲ ಮಾಡಿದ್ದರಿಂದ ಸಾಲ ಕೊಟ್ಟವರು ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಇದರಿಂದ ಬೇಸತ್ತ ಮಹಿಳೆಯು ತನ್ನ ಪುತ್ರ ಹಾಗೂ ಪುತ್ರಿಯ ಜತೆ ಬೆಂಗಳೂರಿನಿಂದ ಮನೆ ಬಿಟ್ಟು ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಮಹಿಳೆಯು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮಕ್ಕಳನ್ನು ಕರೆದುಕೊಂಡು ಪಣಂಬೂರು ಕಡಲ ಕಿನಾರೆಗೆ ತೆರಳಿದ್ದರು. ಆದರೆ ಅಲ್ಲಿ ರಕ್ಷಣಾ ಸಿಬ್ಬಂದಿಯಿದ್ದುದರಿಂದ ಹಿಂದಿರುಗಿ ಬಂದು ಕೂಳೂರು ಸೇತುವೆಯಿಂದ ಹಾರಲು ಯೋಚಿಸಿದ್ದರು ಎನ್ನಲಾಗಿದೆ. ಆದರೆ ಅಲ್ಲೂ ಸಾರ್ವಜನಿಕರು ಇದ್ದುದರಿಂದ ವಿಷ ಸೇವನೆ ಮಾಡಿದ್ದರು ಎಂದು ಹೇಳಲಾಗಿದೆ. ತಕ್ಷಣ ಸಾರ್ವಜನಿಕರು ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಟಾರ್ಜ್ ಆಗಿ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.